ಲಿವ್ ಇನ್ ರಿಲೇಶನ್‌ಶಿಪ್‌ಗಳ ನೋಂದಾವಣೆಗೆ ರಾಜಸ್ತಾನ ಸರಕಾರಕ್ಕೆ ಹೈಕೋರ್ಟ್ ಆದೇಶ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಲಿವ್ ಇನ್ ರಿಲೇಶನ್‌ಶಿಪ್‌ಗಳನ್ನು ನೋಂದಾವಣೆಗೊಳಿಸಲು ವೆಬ್ ಸೈಟ್ ಒಂದನ್ನು ಆರಂಭಿಸುವಂತೆ ರಾಜಸ್ತಾನ ಹೈಕೋರ್ಟ್‌ನ ಏಕಸದಸ್ಯ ಪೀಠವು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಹಲವಾರು ಲಿವ್ ಇನ್ ರಿಲೇಶನ್‌ನಲ್ಲಿರುವ ಹಲವಾರು ಜೋಡಿಗಳು ತಮಗೆ ರಕ್ಷಣೆ ನೀಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಅನೂಪ್ ಕುಮಾರ್ ದಾಂಡ್ ಅವರು ಈ ಕಾನೂನು ಜಾರಿಯಲ್ಲಿರುವವರೆಗೆ ಲಿವ್ ಇನ್ ರಿಲೇಶನ್‌ಶಿಪ್‌ಗಳನ್ನು ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಧಿಕರಣ(ಟ್ರಿಬ್ಯೂನಲ್)ದಲ್ಲಿ ನೋಂದಾವಣೆೆಗೊಳಿಸಬೇಕೆಂದು ಅಭಿಪ್ರಾಯಿಸಿದರು.
ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರುವ ಹಲವಾರು ಜೋಡಿಗಳು ತಮ್ಮ ಕುಟುಂಬಗಳಿಂದ ಹಾಗೂ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳದೆ ಇರುವ ಸಮಾಜದಿಂದ ಬೆದರಿಕೆ ಹಾಗೂ ಅಪಾಯವನ್ನು ಎದುರಿಸುತ್ತಿದ್ದಾರೆ. ಸಂವಿಧಾನದ 226ನೇ ವಿಧಿಯಡಿ ಅವರು ಅರ್ಜಿಯನ್ನು ಸಲ್ಲಿಸಿದ್ದು, 21ನೇ ವಿಧಿಯನ್ವಯ ತಮಗೆ ರಕ್ಷಣೆ ನೀಡುವಂತೆ ಕೋರುತ್ತಿದ್ದಾರೆ. ನ್ಯಾಯಾಲಯಗಳು ಇಂತಹ ಅರ್ಜಿಗಳ ಮಹಾಪೂರದಿಂದ ಮುಳುಗಿ ಹೋಗಿವೆ ಎಂದು ನ್ಯಾಯಪೀಠ ಗಮನಸೆಳೆದಿದೆ.
ಲಿವ್ ಇನ್ ರಿಲೇಶನ್‌ಶಿಪ್‌ಗಳನ್ನು ನಿಯಮಬದ್ಧಗೊಳಿಸಬೇಕಾದ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ. ಲಿವ್ ಇನ್ ರಿಲೇಶನ್‌ಶಿಪ್ ಚಿಂತನೆಯು ವಿಶಿಷ್ಟವಾದುದು. ಆದರೆ ವಾಸ್ತವದಲ್ಲಿ ಹಲವಾರು ಸಮಸ್ಯೆಗಳಿಗೆ ಇದು ದಾರಿ ಮಾಡಿಕೊಡುತ್ತವೆ.ಇಂತಹ ಸಂಬಂಧದಲ್ಲಿ ಮಹಿಳೆಯರ ಸ್ಥಾನಮಾನವು ಪತ್ನಿಗೆ ಸಮಾನವಾಗಿರುವುದಿಲ್ಲ ಹಾಗೂ ಸಾಮಾಜಿಕ ಸಮ್ಮತಿಯ ಕೊರತೆಯನ್ನು ಎದುರಿಸುತ್ತದೆ. ಆದುದರಿಂದ ಸರಕಾರದಿಂದ ಸ್ಥಾಪಿಸಲ್ಪಡುವ ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಧೀಕರಣದಿಂದ ಲಿವ್‌ಇನ್‌ರಿಲೇಶನ್ ಶಿಪ್ ನೋಂದಾವಣೆಯಾಗಬೇಕು ಎಂದು ನ್ಯಾಯಪೀಠ ಹೇಳಿದೆ.