×
Ad

ಮೈತೇಯಿಗಳಿಂದಲೂ ಶಾಂತಿ ಸ್ಥಾಪನೆಯಾಗಲೇಬೇಕು: ಗೃಹ ಸಚಿವಾಲಯದೊಂದಿಗಿನ ಸಭೆಯಲ್ಲಿ ಕುಕಿಗಳ ಆಗ್ರಹ

Update: 2025-01-17 21:45 IST

PC : Special Arrangement \ deccanherald.com

ಗುವಾಹಟಿ: ಮೈತೇಯಿ ಗುಂಪಿನಿಂದಲೂ ಶಾಂತಿ ಸ್ಥಾಪನೆಯಾಗಬೇಕು ಎಂದು ಕುಕಿ ಗುಂಪು ಆಗ್ರಹಿಸಿದೆ ಎಂದು ಶುಕ್ರವಾರ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ. ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪರಿಹಾರವೊಂದನ್ನು ಕಂಡುಕೊಳ್ಳಲು ಶಾಂತಿ ಕಾಪಾಡಿಕೊಳ್ಳುವುದರ ಕುರಿತು ನಡೆದ ಸಭೆಯಲ್ಲಿ ಕುಕಿ ಗುಂಪು ಈ ಆಗ್ರಹ ಮಾಡಿದೆ.

ಮೇ 2023ರಲ್ಲಿ ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಾಗಿನಿಂದ ಇದೇ ಪ್ರಥಮ ಬಾರಿಗೆ ಕುಕಿ ಝೋ ಕೌನ್ಸಿಲ್ ನ ನಾಲ್ವರು ಸದಸ್ಯರ ನಿಯೋಗ, ಕುಕಿ ಝೋ ಸಮುದಾಯಗಳನ್ನು ಪ್ರತಿನಿಧಿಸುವ ಎಲ್ಲ ಪ್ರಮುಖ ಸಂಘಟನೆಗಳ ಮಹಾ ಒಕ್ಕೂಟವು ಶುಕ್ರವಾರ ಹೊಸ ದಿಲ್ಲಿಯ ಖಾಸಗಿ ಹೋಟೆಲೊಂದರಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ಸಭೆ ನಡೆಸಿದವು.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡಾಗಿನಿಂದ ಇಲ್ಲಿಯವರೆಗೆ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 60,000ಕ್ಕೂ ಹೆಚ್ಚು ಮಂದಿ ನಿರ್ವಸತಿಗರಾಗಿದ್ದಾರೆ.

“ಇದೊಂದು ಬಗೆಯ ಮೌನ ಮುರಿಯುವ ಸಭೆಯಾಗಿತ್ತು. ಪರಿಚಯದ ನಂತರ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಮಣಿಪುರದಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಆದರೆ, ಮೈತೇಯಿ ಸಮುದಾಯದ ಕಡೆಯಿಂದಲೂ ಶಾಂತಿ ಪಾಲನೆಯಾಗಬೇಕು ಎಂದು ನಾವು ಅವರಿಗೆ ಮನವರಿಕೆ ಮಾಡಿದೆವು. ಒಂದು ವೇಳೆ ಮೈತೇಯಿಗಳು ನಮ್ಮ ಗ್ರಾಮಗಳು ಹಾಗೂ ನಮ್ಮ ಜನರ ಮೇಲೆ ದಾಳಿ ನಡೆಸಿದರೆ, ನಾವು ಪ್ರತೀಕಾರದ ದಾಳಿ ನಡೆಸದೆ ವಿಧಿಯಿಲ್ಲ” ಎಂದು ಕುಕಿ ಝೋ ಕೌನ್ಸಿಲ್ ನಿಯೋಗದ ಭಾಗವಾಗಿದ್ದ, ಕುಕಿ ಝೋ ಕೌನ್ಸಿಲ್ ನ ವಕ್ತಾರರಾದ ಝಿಂಗಾ ವುವಾಲ್ ಝಾಂಗ್ ತಿಳಿಸಿದ್ದಾರೆ.

ಈ ನಿಯೋಗದ ನೇತೃತ್ವವನ್ನು ಕುಕಿ ಝೋ ಕೌನ್ಸಿಲ್ ನ ಅಧ್ಯಕ್ಷ ಹೆನ್ಲಿಯಾನ್ ಥಾಂಗ್ ಥಾಂಗ್ಲೆಟ್ ವಹಿಸಿದ್ದರು. ಸರಕಾರದ ನೇತೃತ್ವವನ್ನು ಈಶಾನ್ಯ ಭಾರತ ಭಾಗದ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸಲಹೆಗಾರ ಎ.ಕೆ.ಮಿಶ್ರಾ ವಹಿಸಿದ್ದರು. ಈ ಸಭೆ ಒಂದು ಗಂಟೆಗಿಂತ ಹೆಚ್ಚು ಕಾಲ ನಡೆಯಿತು ಎಂದು ಹೇಳಲಾಗಿದೆ.

ಕಳೆದ ವರ್ಷ ಕುಕಿ ಸಮುದಾಯಗಳನ್ನು ಪ್ರತಿನಿಧಿಸುವ ಅತ್ಯುನ್ನತ ನೀತಿ ನಿರ್ಧಾರಕ ಸಂಘಟನೆಯನ್ನಾಗಿ ಕುಕಿ ಝೋ ಕೌನ್ಸಿಲ್ ಅನ್ನು ರಚಿಸಲಾಗಿತ್ತು. ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ನೆನಪೋಲೆಯನ್ನೂ ಸಲ್ಲಿಸಿದ ಕುಕಿ ಝೋ ಕೌನ್ಸಿಲ್, ಕೇಂದ್ರಾಡಳಿತ ಪ್ರದೇಶದಂತೆ ಮಣಿಪುರವನ್ನು ಪ್ರತ್ಯೇಕ ಆಡಳಿತವನ್ನಾಗಿ ರಚಿಸಬೇಕು ಎಂದು ಪುನರುಚ್ಚರಿಸಿದೆ. ಇದಕ್ಕಾಗಿ ಶಾಸನವೊಂದನ್ನು ರೂಪಿಸಿದರೆ ಮಾತ್ರ, ಶಾಂತಿ ಮರುಸ್ಥಾಪನೆಯಾಗಿ, ಸಂಘರ್ಷ ಕೊನೆಗೊಳ್ಳಲಿದೆ ಎಂದು ಅದು ಪ್ರತಿಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News