×
Ad

ಭೋಜಶಾಲಾ-ಕಮಾಲ್ ಮಸೀದಿ ಸಂಕೀರ್ಣದಲ್ಲಿ ಶಾಂತಿಯುತವಾಗಿ ನಡೆದ ಹಿಂದುಗಳ ಪೂಜೆ, ಮುಸ್ಲಿಮರ ನಮಾಝ್‌

Update: 2026-01-23 20:23 IST

Photo Credit : newindianexpress.com

ಧಾರ್,ಜ.23: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ-ಕಮಾಲ್ ಮೌಲಾ ಮಸೀದಿ ಸಂಕೀರ್ಣವು ಶುಕ್ರವಾರ ಶಾಂತಿಯುತವಾಗಿದ್ದು, ವಸಂತ ಪೂರ್ಣಿಮೆ ಪ್ರಯುಕ್ತ ಹಿಂದುಗಳು ಪೂಜೆಯನ್ನು ಸಲ್ಲಿಸಿದರು. ಇದೇ ವೇಳೆ ಸಂಕೀರ್ಣದ ಇನ್ನೊಂದು ಭಾಗದಲ್ಲಿ ಮುಸ್ಲಿಮರು ನಮಾಝ್‌ ಮಾಡಿದರು.

ನಸುಕಿನಲ್ಲಿ ಭಾರೀ ಭದ್ರತೆಯ ನಡುವೆ ಆರಂಭಗೊಂಡಿದ್ದ ಪೂಜೆ ಸೂರ್ಯಾಸ್ತದ ವೇಳೆಗೆ ಅಂತ್ಯಗೊಂಡಿತು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳಂತೆ ಮುಸ್ಲಿಮರು ತಮಗೆ ನಿಗದಿಗೊಳಿಸಲಾಗಿದ್ದ ಸ್ಥಳದಲ್ಲಿ ಅಪರಾಹ್ನ ಒಂದರಿಂದ ಮೂರು ಗಂಟೆಯವರೆಗೆ ನಮಾಝ್‌ ಸಲ್ಲಿಸಿದರು ಎಂದು ಜಿಲ್ಲಾಡಳಿತವು ಹೇಳಿಕೆಯಲ್ಲಿ ತಿಳಿಸಿದೆ.

ನಗರದಲ್ಲಿ ಸುಮಾರು 8,000 ಪೊಲೀಸ್‌ ಮತ್ತು ಅರೆ ಸೇನಾಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಈ ವರ್ಷ ವಸಂತ ಪಂಚಮಿ ಶುಕ್ರವಾರವೇ ಬಂದಿದ್ದರಿಂದ ಸಂಭಾವ್ಯ ಸಂಘರ್ಷವನ್ನು ತಪ್ಪಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಉಭಯ ಸಮುದಾಯಗಳಿಗೆ ಸಮಯವನ್ನು ನಿಗದಿಗೊಳಿಸಿತ್ತು. ಹಿಂದುಗಳಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಮತ್ತು ಅಪರಾಹ್ನ ಒಂದರಿಂದ ಮೂರು ಗಂಟೆಯವರೆಗೆ ಮುಸ್ಲಿಮರು ನಮಾಝ್‌ ಮಾಡಲು ಅನುಮತಿ ನೀಡಿತ್ತು.

ಸೂರ್ಯೋದಯದ ವೇಳೆಗೆ ಕೇಸರಿ ಧ್ವಜಗಳು ಮತ್ತು ಹೂವುಗಳಿಂದ ಅಲಂಕೃತವಾಗಿದ್ದ ಐತಿಹಾಸಿಕ ಸ್ಥಳದಲ್ಲಿ ಭಕ್ತರು ಸಮಾವೇಶಗೊಂಡಿದ್ದರು.

ಸ್ಥಳೀಯ ಸಂಘಟನೆ ಭೋಜ ಉತ್ಸವ ಸಮಿತಿ ಸದಸ್ಯರು ವೈದಿಕ ಮಂತ್ರಗಳ ಪಠಣದ ನಡುವೆ ಸರಸ್ವತಿ ದೇವಿಯ ಚಿತ್ರವನ್ನು ಪ್ರತಿಷ್ಠಾಪಿಸುವ ಮೂಲಕ ಪೂಜೆಯನ್ನು ಆರಂಭಿಸಿದರು. ಹವನ ಕುಂಡದಲ್ಲಿ ಆಹುತಿಗಳನ್ನು ಸಲ್ಲಿಸುವ ಮೂಲಕ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಖಂಡ ಪೂಜೆಗೆ ಚಾಲನೆ ನೀಡಲಾಗಿತ್ತು.

ಸಂಕೀರ್ಣದ ಮೂಲೆಮೂಲೆಯಲ್ಲಿಯೂ ಭದ್ರತಾ ಸಿಬ್ಬಂದಿಗಳು ಕಟ್ಟೆಚ್ಚರವನ್ನು ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News