ಕೆಮ್ಮಿನ ಸಿರಪ್ ಕಳ್ಳಸಾಗಣೆ| ಪ್ರಮುಖ ಆರೋಪಿಯ 28.5 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ ಪೊಲೀಸರು
ಸಾಂದರ್ಭಿಕ ಚಿತ್ರ | Photo Credit : freepik
ವಾರಣಾಸಿ/ಸೋನಭದ್ರಾ,ಜ.23: ನ್ಯಾಯಾಲಯದ ಆದೇಶದ ಮೇರೆಗೆ ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಕೋಡಿನ್ ಒಳಗೊಂಡ ಕೆಮ್ಮಿನ ಸಿರಪ್ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಭೋಲಾ ಪ್ರಸಾದ್‌ಗೆ ಸೇರಿದ ಸುಮಾರು 28.5 ಕೋ.ರೂ.ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ವಾರಣಾಸಿಯ ಮೂರು ವಿಭಿನ್ನ ಸ್ಥಳಗಳಲ್ಲಿ ಜಪ್ತಿ ಕಾರ್ಯಾಚರಣೆ ನಡೆಸಲಾಗಿದೆ. ವಾರಣಾಸಿ ನಿವಾಸಿ ಪ್ರಸಾದ್ ಪ್ರಸ್ತುತ ಸೋನಭದ್ರಾ ಜಿಲ್ಲಾ ಜೈಲಿನಲ್ಲಿದ್ದಾನೆ.
ಪ್ರಸಾದ ಸಂಘಟಿತ ಮಾಫಿಯಾವನ್ನು ನಡೆಸುತ್ತಿದ್ದ ಮತ್ತು ಅಕ್ರಮ ವ್ಯವಹಾರದ ಮೂಲಕ 28.5 ಕೋ.ರೂ.ಮೌಲ್ಯದ ಆಸ್ತಿಗಳನ್ನು ಸಂಪಾದಿಸಿದ್ದ ಎನ್ನುವುದು ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು ಎಂದು ಸೋನಭದ್ರಾ ಎಸ್‌ಪಿ ಅಭಿಷೇಕ ವರ್ಮಾ ತಿಳಿಸಿದರು.
ಪೊಲೀಸರ ಪ್ರಕಾರ ಜಫ್ತಿ ಮಾಡಲಾಗಿರುವ ಆಸ್ತಿಗಳಲ್ಲಿ ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿವಿ ಕ್ಯಾಂಪಸ್‌ನಲ್ಲಿಯ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಒಟ್ಟು 1,13,93,276 ರೂ.ಗಳ ಎರಡು ಸ್ಥಿರ ಠೇವಣಿ ರಸೀದಿಗಳು ಸೇರಿವೆ. ಇದೇ ವೇಳೆ ಇತರ ಎರಡು ಬ್ಯಾಂಕ್‌ಗಳಲ್ಲಿರುವ 6,89,607 ರೂ.ಗಳನ್ನು ಹಿಂದೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.
1.22 ಕೋ.ರೂ.ಮೌಲ್ಯದ ಮರ್ಸಿಡಿಸ್-ಬೆಂಝ್ ಕಾರು ಹಾಗೂ ಫೆಬ್ರವರಿ 2023ರಲ್ಲಿ ವಾರಣಾಸಿಯಲ್ಲಿ ಪ್ರಸಾದ್‌ನ ಪತ್ನಿ ಶಾರದಾ ಜೈಸ್ವಾಲ್ ಹೆಸರಿನಲ್ಲಿ 3.03 ಕೋ.ರೂ.ಗೆ ಖರೀದಿಸಿದ್ದ ಎರಡು ಮನೆಗಳೂ ಜಪ್ತಿ ಮಾಡಲಾಗಿರುವ ಆಸ್ತಿಗಳಲ್ಲಿ ಸೇರಿವೆ.
ಪ್ರಸಾದ್ ಜುಲೈ 2025ರಲ್ಲಿ 23 ಕೋ.ರೂ.ಗಳಿಗೆ ತನ್ನ ಪತ್ನಿಯ ಹೆಸರಿನಲ್ಲಿ ಖರೀದಿಸಿದ್ದ ವಾರಣಾಸಿಯಲ್ಲಿನ ಕಟ್ಟಡವೊಂದನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ವಿದೇಶಕ್ಕೆ ಪರಾರಿಯಾಗಲು ಪ್ರಯತ್ನಿಸಿದ್ದ ಪ್ರಸಾದ್‌ನನ್ನು ಕೋಲ್ಕತಾದ ಡಂ ಡಂ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಂಧಿಸಲಾಗಿತ್ತು.