ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಶಬರಿಮಲೆ ಚಿನ್ನ ಕಳವು ಪ್ರಕರಣದ ಆರೋಪಿಗಳನ್ನು ಜೈಲಿಗೆ ಹಾಕುತ್ತೇವೆ: ಪ್ರಧಾನಿ ಮೋದಿ ಭರವಸೆ
PC : x/@ani_digital
ತಿರುವನಂತಪುರಂ: ಒಂದು ವೇಳೆ ಕೇರಳದಲ್ಲಿ ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ, ಶಬರಿಮಲೆ ದೇವಸ್ಥಾನಕ್ಕೆ ಆಗಿರುವ ಚಿನ್ನದ ನಷ್ಟವನ್ನು ಪರಿಶೀಲಿಸಲಾಗುವುದು ಹಾಗೂ ಇದಕ್ಕೆ ಜವಾಬ್ದಾರರಾಗಿರುವವರನ್ನು ಜೈಲಿಗೆ ಕಳಿಸಲಾಗುವುದು ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಹಾಗೂ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಲು ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಆಗಮಿಸಿದ್ದರು. ಬಳಿಕ, ತಿರುವನಂತಪುರಂನಲ್ಲಿ ಬಿಜೆಪಿ-ಎನ್‌ಡಿಎ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಒಂದು ವೇಳೆ ಬಿಜೆಪಿಯೇನಾದರೂ ಕೇರಳದಲ್ಲಿ ಸರಕಾರ ರಚಿಸಿದರೆ, ಶಬರಿಮಲೆ ದೇವಸ್ಥಾನದ ಚಿನ್ನ ನಷ್ಟದ ಕುರಿತು ಪರಿಶೀಲಿಸಲಾಗುವುದು ಹಾಗೂ ಆರೋಪಿಗಳನ್ನು ಜೈಲಿಗೆ ಹಾಕಲಾಗುವುದು. ಇದು ಮೋದಿಯ ಗ್ಯಾರಂಟಿ” ಎಂದು ಭರವಸೆ ನೀಡಿದ್ದಾರೆ.
ಈ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, “ಕಾಂಗ್ರೆಸ್ ಪಕ್ಷವು ಮುಸ್ಲಿಂ ಲೀಗ್ ಮಾವೋಯಿಸ್ಟ್ ಕಾಂಗ್ರೆಸ್ ಆಗಿದೆ” ಎಂದು ಲೇವಡಿ ಮಾಡಿದ್ದಾರೆ.
ತಿರುವನಂತಪುರಂ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗಳಿಸಿರುವ ಜಯವನ್ನು ಉಲ್ಲೇಖಿಸಿದ ಅವರು, “ಈ ವಿಜಯವು ಕೇರಳವನ್ನು ವಿಕಸಿತ ಕೇರಳವನ್ನಾಗಿಸುವ ನಿರ್ಣಯವಾಗಿದೆ. ಈ ವಿಜಯವು ಕೇರಳವನ್ನು ಭ್ರಷ್ಟಾಚಾರ, ಎಲ್ಡಿಎಫ್, ಯುಡಿಎಫ್ ನಿಂದ ಮುಕ್ತಗೊಳಿಸುವ ವಿಜಯವಾಗಿದೆ” ಎಂದು ಅವರು ಬಣ್ಣಿಸಿದ್ದಾರೆ.