ಆಪರೇಷನ್ ಸಿಂಧೂರ್ ಕುರಿತ ನಿಲುವಿಗೆ ಕ್ಷಮೆಯಾಚಿಸುವುದಿಲ್ಲ: ಸಂಸದ ಶಶಿ ತರೂರ್
“ಕಾಂಗ್ರೆಸ್ ಪಕ್ಷದ ನಿಲುವನ್ನು ಉಲ್ಲಂಘಿಸಿಲ್ಲ”
ಶಶಿ ತರೂರ್ (File Photo: PTI)
ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಕುರಿತ ತನ್ನ ಹೇಳಿಕೆಗೆ ಕ್ಷಮೆಯಾಚಿಸುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಹೇಳಿದ್ದಾರೆ. ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷದ ನಿಲುವನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.
ಕೋಝಿಕ್ಕೋಡ್‌ನಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಶಶಿ ತರೂರ್, ನಾನು ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ನಿಲುವುಗಳನ್ನು ಉಲ್ಲಂಘಿಸಿಲ್ಲ. ಆಪರೇಷನ್ ಸಿಂಧೂರ್ ಬಗ್ಗೆ ನಾನು ಬಲವಾದ ನಿಲುವನ್ನು ತೆಗೆದುಕೊಂಡಿದ್ದೇನೆ ಮತ್ತು ನಾನು ಆ ಬಗ್ಗೆ ಎಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಪಕ್ಷದ ಸಮಾರಂಭವೊಂದರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮನ್ನು ಗುರುತಿಸದೆ ನಿರ್ಲಕ್ಷಿಸಿದ್ದಾರೆ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹಿರಿಯ ಸಂಸದ ಶಶಿ ತರೂರ್ ಅವರು ಕೇರಳ ವಿಧಾನಸಭಾ ಚುನಾವಣೆಯ ಕಾರ್ಯತಂತ್ರ ಚರ್ಚೆಗೆ ಪಕ್ಷದ ಕೇಂದ್ರ ನಾಯಕತ್ವ ಕರೆದಿದ್ದ ಸಭೆಗೆ ಗೈರುಹಾಜರಾಗಿದ್ದಾರೆ ಎಂಬ ಊಹಾಪೋಹಗಳಿದೆ.
ಕಾಂಗ್ರೆಸ್ ಪಕ್ಷದ ನಾಯಕತ್ವದೊಂದಿಗೆ ತರೂರ್ ಅವರ ಭಿನ್ನಾಭಿಪ್ರಾಯದ ಕುರಿತ ವರದಿಗಳ ಮಧ್ಯೆ ಅವರ ಈ ಹೇಳಿಕೆ ಹೊರಬಿದ್ದಿದೆ.
‘After Pahalgam, India must hit back smart, not just hard‘ ಎಂಬ The Indian Express ನಲ್ಲಿನ ಲೇಖನವನ್ನು ಉಲ್ಲೇಖಿಸಿದ ಶಶಿ ತರೂರ್, "ಪಹಲ್ಗಮ್ ಘಟನೆ ನಡೆದ ನಂತರ, ನಾನು ಒಬ್ಬ ವೀಕ್ಷಕ ಮತ್ತು ನಿರೂಪಕ, ಬರಹಗಾರನಾಗಿ, ದಿ ಇಂಡಿಯನ್ ಎಕ್ಸ್‌ನಲ್ಲಿ ಒಂದು ಅಂಕಣವನ್ನು ಬರೆದಿದ್ದೆ. ಅದಕ್ಕೆ ನಾನು After Pahalgam ಎಂಬ ಶೀರ್ಷಿಕೆಯನ್ನು ನೀಡಿದ್ದೇನೆ ಎಂದು ಭಾವಿಸುತ್ತೇನೆ. ಅವರು ಅದಕ್ಕೆ 'ಹಾರ್ಡ್ ಹಿಟ್, ಸ್ಮಾರ್ಟ್ ಹಿಟ್' ಎಂಬ ಶೀರ್ಷಿಕೆಯನ್ನು ನೀಡಿದರು. ಆ ಲೇಖನದಲ್ಲಿ ನಾನು ಇದಕ್ಕೆ ಶಿಕ್ಷೆಯಾಗದೇ ಇರಲು ಸಾಧ್ಯವಿಲ್ಲ; ಇದಕ್ಕೆ ಖಂಡಿತವಾಗಿಯೂ ಒಂದು ಗತಿಶೀಲ ಪ್ರತಿಕ್ರಿಯೆ ಇರಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಅದೇ ಸಮಯದಲ್ಲಿ, ನಮ್ಮದು ಅಭಿವೃದ್ಧಿಗೆ ಒತ್ತು ನೀಡಿರುವ ದೇಶವಾಗಿದೆ. ಪಾಕಿಸ್ತಾನ ಜೊತೆ ಸಂಪೂರ್ಣ ಯುದ್ಧದಂತಹ ಸಂಘರ್ಷಕ್ಕೆ ಎಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ನಮ್ಮದು ವಿದೇಶಿ ಹೂಡಿಕೆಗಳ ಮೇಲೆ ಅವಲಂಬಿತವಾಗಿರುವ ದೇಶವಾಗಿದೆ. ಹೂಡಿಕೆದಾರರು ಯುದ್ಧ ಪ್ರದೇಶಗಳನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಭಾರತವನ್ನು ಯುದ್ಧ ಪ್ರದೇಶವನ್ನಾಗಿ ಮಾಡುವಂತಹ ಹೆಜ್ಜೆಯನ್ನು ನಾವು ಇಡಲು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೇನೆ. ಭಯೋತ್ಪಾದಕ ಗುರಿಗಳನ್ನು ಮಾತ್ರ ಹೊಡೆಯಿರಿ ಮತ್ತು ಭಾರತೀಯರು ಭಯೋತ್ಪಾದನೆಯನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ ಎಂದು ಸ್ಪಷ್ಟವಾಗಿ ಸೂಚಿಸಿ. ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿಲ್ಲ. ಭಯೋತ್ಪಾದನೆಯನ್ನು ನಿಗ್ರಹಿಸಲು ಪಾಕಿಸ್ತಾನದ ಅಸಮರ್ಥತೆ ಮತ್ತು ಇಷ್ಟವಿಲ್ಲದಿರುವುದು ನಮ್ಮನ್ನು ಹೀಗೆ ಮಾಡಲು ಒತ್ತಾಯಿಸಿದೆ. ಪಾಕಿಸ್ತಾನಕ್ಕೆ ಸಂಘರ್ಷವನ್ನು ಹೆಚ್ಚಿಸಲು ಇನ್ನಷ್ಟು ಕಾರಣಗಳನ್ನು ನೀಡಬಾರದು ಎಂದು ನಾನು ಹೇಳಿದ್ದೇನೆ. ಇದನ್ನೇ ನಾನು ಬರೆದಿದ್ದೇನೆ ಎಂದು ಶಶಿ ತರೂರ್ ಹೇಳಿದ್ದಾರೆ.