ಉತ್ತರಪ್ರದೇಶ| ಕಾರು ಹೊಂಡಕ್ಕೆ ಬಿದ್ದು ಸಾಫ್ಟ್‌ವೇರ್ ಎಂಜಿನಿಯರ್ ಮೃತಪಟ್ಟ ಪ್ರಕರಣ: ಇಬ್ಬರು ಬಿಲ್ಡರ್‌ಗಳ ಬಂಧನ
Update: 2026-01-23 21:41 IST
Photo Credit : indiatoday.in
ನೊಯ್ಡಾ,ಜ.23: ಉತ್ತರಪ್ರದೇಶದ ನೊಯ್ಡಾದಲ್ಲಿ ನಿರ್ಮಾಣಹಂತದ ಕಟ್ಟಡವೊಂದರ ಸಮೀಪ ನೀರು ತುಂಬಿದ ಹೊಂಡಕ್ಕೆ ಕಾರು ಬಿದ್ದು, 27ವರ್ಷ ವಯಸ್ಸಿನ ಸಾಫ್ಟ್‌ವೇರ್ ಎಂಜಿನಿಯರ್ ಮೃತಪಟ್ಟ ಘಟನೆಗೆ ಸಂಬಂಧಿಸಿ ನಗರ ಪೊಲೀಸರು ಶುಕ್ರವಾರ ಇನ್ನಿಬ್ಬರು ಬಿಲ್ಡರ್‌ಗಳನ್ನು ಬಂಧಿಸಿದ್ದಾರೆ.
ಎಂಜಿನಿಯರ್ ಯುವರಾಜ್ ಮೆಹ್ತಾ ಅವರು ದಟ್ಟಮಂಜಿನ ನಡುವೆ ಕಾರು ಚಲಾಯಿಸುತ್ತಾ ನೊಯ್ಡಾದಲ್ಲಿರುವ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ರಸ್ತೆಯ ಕಡಿದಾದ ತಿರುವಿನಲ್ಲಿ ಈ ದುರಂತ ಸಂಭವಿಸಿತ್ತು.
ಬಂಧಿತರನ್ನು ಫರೀದಾಬಾದ್ ನಿವಾಸಿ ರವಿ ಬನ್ಸಾಲ್ ಹಾಗೂ ಗಾಝಿಯಾಬಾದ್ ನಿವಾಸಿ ಸಚಿನ್ ಕರಣ್‌ವಾಲ್ ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಅವಘಡ ನಡೆದ ಸ್ಥಳ ಜೊತೆ ನಂಟು ಹೊಂದಿರುವ ರಿಯಲ್ ಎಸ್ಟೇಟ್ ಕಂಪೆನಿಯಾದ ಲೋಟಸ್ ಗ್ರೀನ್ ಕನ್‌ಸ್ಟ್ರಕ್ಷನ್ಸ್‌ನ ಪದಾಧಿಕಾರಿಗಳಾಗಿದ್ದಾರೆ ಮತ್ತು ಈ ನಿವೇಶನದ ಪಾಲುದಾರಿಕೆ ಹೊಂದಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.