ಬೆಟ್ಟಗುಡ್ಡಗಳಲ್ಲಿ ಅಕ್ರಮ ಮರ ಕಡಿತ: ನೆರೆಪೀಡಿತ ರಾಜ್ಯಗಳಿಗೆ ಸುಪ್ರೀಂ ನೋಟಿಸ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ,ಸೆ.4: ಉತ್ತರ ಭಾರತದಾದ್ಯಂತ ಭೂಕುಸಿತಗಳು ಮತ್ತು ಪ್ರವಾಹಗಳ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಅಕ್ರಮ ಮರ ಕಡಿಯುವಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಹಿಮಾಚಲ ಪ್ರದೇಶದಲ್ಲಿ ಪ್ರವಾಹದ ನೀರಿನಲ್ಲಿ ತೇಲುತ್ತಿರುವ ಮರಗಳ ದಿಮ್ಮಿಗಳ ವೀಡಿಯೊಗಳನ್ನು ಎತ್ತಿ ತೋರಿಸಿರುವ ಸರ್ವೋಚ್ಚ ನ್ಯಾಯಾಲಯವು, ಬೆಟ್ಟಗುಡ್ಡಗಳಲ್ಲಿ ಅಕ್ರಮವಾಗಿ ಮರ ಕಡಿಯಲಾಗುತ್ತಿದೆ ಎನ್ನುವುದನ್ನು ಗಮನಿಸಿದೆ.
ಉತ್ತರ ಭಾರತದಾದ್ಯಂತ ಹಲವಾರು ರಾಜ್ಯಗಳು ಭೀಕರ ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿದ್ದು, ಪಂಜಾಬ್ ಕಳೆದ ನಾಲ್ಕು ದಶಕಗಳಲ್ಲಿ ಅತ್ಯಂತ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಇದು ಹಿಂದೆಂದೂ ಕಾಣದ ಪರಿಸ್ಥಿತಿಯಾಗಿದೆ ಎಂದು ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿ.ಆರ್.ಗವಾಯಿ ಅವರು ಅಕ್ರಮ ಮರ ಕಡಿಯುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
‘ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ಹಿಂದೆಂದೂ ಕಾಣದ ಭೂಕುಸಿತಗಳು ಮತ್ತು ಪ್ರವಾಹಗಳನ್ನು ನಾವು ನೋಡುತ್ತಿದ್ದೇವೆ. ಪ್ರವಾಹದ ನೀರಿನಲ್ಲಿ ಭಾರೀ ಸಂಖ್ಯೆಯಲ್ಲಿ ಮರದ ದಿಮ್ಮಿಗಳು ತೇಲಿ ಬರುತ್ತಿರುವುದು ಮಾಧ್ಯಮ ವರದಿಗಳ ಮೂಲಕ ಗಮನಕ್ಕೆ ಬಂದಿದೆ. ಬೆಟ್ಟಗುಡ್ಡಗಳಲ್ಲಿ ಅಕ್ರಮವಾಗಿ ಮರಗಳನ್ನು ಕಡಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸಿಜೆಐ ಗವಾಯಿ ಹೇಳಿದರು.
ಬೆಟ್ಟಗುಡ್ಡಗಳಲ್ಲಿ ಪರಿಸರ ನಾಶ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(ಪಿಐಎಲ್) ವಿಚಾರಣೆ ಸಂದರ್ಭದಲ್ಲಿ ಈ ಹೇಳಿಕೆ ಹೊರಬಿದ್ದಿದೆ. ಇದು ಗಂಭೀರ ವಿಷಯವಾಗಿದೆ ಎಂದು ಒತ್ತಿ ಹೇಳಿದ ಸಿಜೆಐ ಗವಾಯಿ ಮತ್ತು ನ್ಯಾ.ಕೆ.ವಿನೋದಚಂದ್ರನ್ ಅವರ ಪೀಠವು ಕೇಂದ್ರ ಹಾಗೂ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮುಕಾಶ್ಮೀರ ಮತ್ತು ಪಂಜಾಬ್ ಸರಕಾರಗಳಿಗೆ ನೋಟಿಸ್ ಗಳನ್ನು ಹೊರಡಿಸಿತು. ಎರಡು ವಾರಗಳಲ್ಲಿ ಉತ್ತರಿಸುವಂತೆ ಅದು ಸೂಚಿಸಿದೆ.
ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮತ್ತು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮರದ ದಿಮ್ಮಿಗಳು ಪ್ರವಾಹದ ನೀರಿನಲ್ಲಿ ತೇಲುತ್ತಿರುವುದಕ್ಕೆ ಕಾರಣಗಳನ್ನು ಕಂಡುಕೊಳ್ಳುವಂತೆ ನ್ಯಾಯಾಲಯವು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೂ ಸೂಚಿಸಿತು. ತಾನು ಪರಿಸರ ಮತ್ತು ಅರಣ್ಯ ಸಚಿವಾಲಯದ ಕಾರ್ಯದರ್ಶಿಯನ್ನು ಸಂಪರ್ಕಿಸಿ ವಿವರವಾದ ಮಾಹಿತಿಗಾಗಿ ಕೋರುವುದಾಗಿ ಮೆಹ್ತಾ ಪೀಠಕ್ಕೆ ತಿಳಿಸಿದರು.
ಮುಂದಿನ ವಿಚಾರಣೆಯು ಎರಡು ವಾರಗಳ ಬಳಿಕ ನಡೆಯಲಿದೆ.