ಜಪಾನ್‌ನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ: ವರದಿ
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ,ಡಿ.30: ಭಾರತವು ಜಪಾನ್‌ನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ ಎಂದು ಸರಕಾರದ ವರ್ಷಾಂತ್ಯದ ಆರ್ಥಿಕ ಪುನರ್‌ಪರಿಶೀಲನೆಯ ಲೆಕ್ಕಾಚಾರವು ಹೇಳಿದೆ.
ಆದಾಗ್ಯೂ ಅಧಿಕೃತ ದೃಢೀಕರಣವು 2026ರಲ್ಲಿ ಬಿಡುಗಡೆಗೊಳ್ಳಲಿರುವ ಅಂತಿಮ ವಾರ್ಷಿಕ ಜಿಡಿಪಿ ದತ್ತಾಂಶಗಳನ್ನು ಅವಲಂಬಿಸಿರುತ್ತದೆ. ಭಾರತವು ಮುಂದಿನ ವರ್ಷ ಜಪಾನ್‌ನ್ನು ಹಿಂದಿಕ್ಕಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಸೂಚಿಸಿದೆ.
ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ಈ ವೇಗವನ್ನು ಉಳಿಸಿಕೊಳ್ಳುವ ಉತ್ತಮ ಸ್ಥಿತಿಯಲ್ಲಿದೆ ಎಂದು ಸೋಮವಾರ ರಾತ್ರಿ ಬಿಡುಗಡೆಗೊಂಡ ಸರಕಾರದ ಸಂಕ್ಷಿಪ್ತ ಆರ್ಥಿಕ ಟಿಪ್ಪಣಿಯು ತಿಳಿಸಿದೆ.
4.18 ಲಕ್ಷ ಕೋಟಿ ಡಾಲರ್ ಜಿಡಿಪಿ ವೌಲ್ಯದೊಂದಿಗೆ ಭಾರತವು ಜಪಾನ್‌ನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಮತ್ತು ಮುಂದಿನ ಎರಡೂವರೆ-ಮೂರು ವರ್ಷಗಳಲ್ಲಿ ಮೂರನೇ ಸ್ಥಾನದಲ್ಲಿರುವ ಜರ್ಮನಿಯನ್ನು ಕೆಳಕ್ಕೆ ತಳ್ಳಲಿದೆ. 2030ರ ವೇಳೆಗೆ ಭಾರತದ ಜಿಡಿಪಿ 7.3 ಲಕ್ಷ ಕೋಟಿ ಡಾಲರ್‌ಗಳನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.
2026ರಲ್ಲಿ ಜಪಾನ್‌ನ 4.46 ಲಕ್ಷ ಕೋಟಿ ಡಾಲರ್‌ಗೆ ಹೋಲಿಸಿದರೆ ಭಾರತವು 4.51 ಲಕ್ಷ ಕೋಟಿ ಡಾಲರ್‌ಗಳ ಆರ್ಥಿಕತೆಯಾಗಲಿದೆ ಎಂದು ಐಎಂಎಫ್ ಅಂದಾಜಿಸಿದೆ.
ಕಳೆದ ಆಗಸ್ಟ್‌ನಲ್ಲಿ ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದಕ್ಕಾಗಿ ಅಮೆರಿಕವು ಭಾರತದ ಮೇಲೆ ಭಾರೀ ಸುಂಕವನ್ನು ವಿಧಿಸಿದ ಬಳಿಕ ಆರ್ಥಿಕ ಕಳವಳಗಳ ಹೊರತಾಗಿಯೂ ಈ ಆಶಾದಾಯಕ ವೌಲ್ಯಮಾಪನ ಹೊರಬಿದ್ದಿದೆ.
ನಿರಂತರ ಬೆಳವಣಿಗೆಯು ನಿರಂತರ ಜಾಗತಿಕ ವ್ಯಾಪಾರ ಅನಿಶ್ಚಿತತೆಗಳ ನಡುವೆಯೂ ತನ್ನ ಪುಟಿದೇಳುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತವು ಹೇಳಿದೆ. ಆದರೆ ಇತರ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳು ಅಷ್ಟೇನೂ ಹಸಿರಾಗಿಲ್ಲ.
ಜನಸಂಖ್ಯೆಯ ವಿಷಯದಲ್ಲಿ,ಭಾರತವು 2023ರಲ್ಲಿ ನೆರೆಯ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಹೆಚ್ಚಿನ ಜನಸಂಖ್ಯೆಯ ದೇಶವಾಗಿದೆ.
ಇತ್ತೀಚಿನ ವಿಶ್ವಬ್ಯಾಂಕ್ ಅಂಕಿಅಂಶಗಳಂತೆ ಭಾರತದ ತಲಾವಾರು ಜಿಡಿಪಿ 2024ರಲ್ಲಿ 2,694 ಡಾಲರ್‌ಗಳಾಗಿದ್ದು,ಇದು ಜಪಾನಿನ 32,487 ಡಾಲರ್‌ಗಿಂತ 12 ಪಟ್ಟು ಮತ್ತು ಜರ್ಮನಿಯ 56,103 ಡಾಲರ್‌ಗಿಂತ 20 ಪಟ್ಟು ಕಡಿಮೆಯಿದೆ.