×
Ad

ಒಡಿಶಾ| ಇಬ್ಬರು ಬಾಂಗ್ಲಾ ಪ್ರಜೆಗಳಿಗೆ ವಿಮಾನನಿಲ್ದಾಣದಲ್ಲಿ ಕಿರುಕುಳ: ಭುವನೇಶ್ವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆ: ವರದಿ

Update: 2025-12-30 20:53 IST

ಸಾಂದರ್ಭಿಕ ಚಿತ್ರ

ಭುವನೇಶ್ವರ,ಡಿ.30: ವೈದ್ಯಕೀಯ ಚಿಕಿತ್ಸೆಗಾಗಿ ಭುವನೇಶ್ವರಕ್ಕೆ ಪ್ರಯಾಣಿಸುತ್ತಿದ್ದ ಬಾಂಗ್ಲಾದೇಶದ ಇಬ್ಬರು ಪ್ರಜೆಗಳ ಗುರುತಿನ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ ಕಾರಣ ಅವರನ್ನು ನಗರದ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪೊಲೀಸ್ ದೃಢೀಕರಣಕ್ಕೊಳಪಡಿಸಿದ ಘಟನೆ ವರದಿಯಾಗಿದೆ. ಅಷ್ಟೇ ಅಲ್ಲದೆ, ಅವರಲ್ಲೊಬ್ಬರಿಗೆ ಚಿಕಿತ್ಸೆ ನೀಡಲಿದ್ದ ಆಸ್ಪತ್ರೆಯ ಆಡಳಿತ ಕೂಡ ತೊಂದರೆಗೆ ಸಿಲುಕಬಹುದೆಂಬ ಭೀತಿಯಿಂದ ರೋಗಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದೆ. ಮುಂಬೈನಿಂದ ವಿಮಾನದಲ್ಲಿ ಆಗಮಿಸಿದ್ದ ಇಬ್ಬರೂ ಆನಂತರ ಬಂದ ದಾರಿಯಲ್ಲೇ ವಾಪಸಾಗಬೇಕಾಯಿತು.

ಇವರಿಬ್ಬರೂ ಸಹೋದರರಾಗಿದ್ದು, ಅವರಲ್ಲೊಬ್ಬರು ಚಾಲಕ ಹಾಗೂ ಇನ್ನೊಬ್ಬರು ಕಾರ್ಮಿಕ. ಇವರ ಪೈಕಿ ಹಿರಿಯ ಸಹೋದರ ಹೃದಯದ ತೊಂದರೆಯಿಂದ ಬಳಲುತ್ತಿದ್ದು, ಆತನ ಚಿಕಿತ್ಸೆಗಾಗಿ ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ಆಗಮಿಸುವವರಿದ್ದರು. ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಬಿಜೆಐಎ)ದಲ್ಲಿ ಬಂದಿಳಿದ ಅವರನ್ನು ಕರೆತರಲು ಆ್ಯಂಬುಲೆನ್ಸನ್ನು ಕೂಡಾ ಆಸ್ಪತ್ರೆಯ ಆಡಳಿತ ಏರ್ಪಾಡು ಮಾಡಿತ್ತು. ಆದರೆ, ಸಂವಹನದ ಕೊರತೆಯಿಂದಾಗಿ ಅದು ತಲುಪಲಿಲ್ಲ. ಆ್ಯಂಬುಲೆನ್ಸ್ ಬಾರದ ಕಾರಣ ಸಹೋದರರು ಆಸ್ಪತ್ರೆಗೆ ತೆರಳಲು ಟ್ಯಾಕ್ಸಿಯೊಂದನ್ನು ಗೊತ್ತುಪಡಿಸಿದರು.

ಟ್ಯಾಕ್ಸಿಯ ಚಾಲಕ,ಇವರಿಬ್ಬರ ರಾಷ್ಟ್ರೀಯತೆಯನ್ನು ಕೇಳಿದಾಗ ಅವರು ಬಾಂಗ್ಲಾದ ಪ್ರಜೆಗಳೆಂದು ತಿಳಿದುಬಂದಿತು. ಆತ ವಿಮಾನನಿಲ್ದಾಣದಲ್ಲಿದ್ದ ಇತರರನ್ನು ಎಚ್ಚರಿಸಿದ. ಸ್ಥಳೀಯರು ಜಮಾವಣೆಗೊಂಡು, ಪೊಲೀಸರಿಗೆ ಮಾಹಿತಿ ನೀಡಿದರು. ಇಬ್ಬರನ್ನೂ ಅಕ್ರಮ ವಲಸಿಗರೆಂಬ ಶಂಕೆಯಲ್ಲಿ ವಿಮಾನನಿಲ್ದಾಣದ ಪೊಲೀಸ್‌ಠಾಣೆಗೆ ಕೊಂಡೊಯ್ದು ವಿಚಾರಣೆಗೊಳಪಡಿಸಲಾಯಿತು ಪಾಸ್‌ಪೋರ್ಟ್, ವೀಸಾ ಸೇರಿದಂತೆ ಅವರ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿದಾಗ ಅವು ಅಧಿಕೃತವೆಂದು ದೃಢಪಟ್ಟಿತು. ಕೂಲಂಕಷ ಪರಿಶೀಲನೆಯ ಬಳಿಕ ಅವರನ್ನು ಬಿಡಲಾಯಿತು ಎಂದು ಪೊಲೀಸ್‌ಠಾಣೆಯ ಉಸ್ತುವಾರಿ ನಿರೀಕ್ಷಕ ರಬೀಂದ್ರನಾಥ್ ಮೆಹರ್ ತಿಳಿಸಿದ್ದಾರೆ.

ಆದಾಗ್ಯೂ, ಬಾಂಗ್ಲಾದೇಶದಲ್ಲಿ ಇತ್ತೀಚಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಜನಾಕ್ರೋಶವುಂಟಾಗಿರುವುದರಿಂದ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಯ ಆಡಳಿತವು ನಿರಾಕರಿಸಿತು. ಬೇರೆ ದಾರಿಯಿಲ್ಲದೆ, ಈ ಸೋದರರು ಮುಂಬೈಗೆ ವಾಪಸಾಗಿದ್ದಾರೆಂದು ವರದಿಗಳು ತಿಳಿಸಿವೆ.

ಡಿಸೆಂಬರ್ 24ರಂದು ಸಂಬಾಲ್‌ಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗನೆಂಬ ಶಂಕೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಪಶ್ಚಿಮಬಂಗಾಳದ ವಲಸೆ ಕಾರ್ಮಿಕನೊಬ್ಬನನ್ನು ಹತ್ಯೆಗೈದ ಕೆಲವು ದಿನಗಳ ಬಳಿಕ ಈ ಘಟನೆ ನಡೆದಿದೆ. ಸಂಭಾಲ್‌ಪುರದ ವಲಸೆ ಕಾರ್ಮಿಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದರು. ಆದರೆ ಆಸ್ತಿ ವಿವಾದಕ್ಕೆ ಸಂಬಂಧಿಸಿ ಆ ವ್ಯಕ್ತಿಯ ಮೇಲೆ ದಾಳಿ ನಡೆದಿದೆಯೇ ಹೊರತು,ಬಾಂಗ್ಲಾದ ಪ್ರಜೆಯೆಂಬ ಶಂಕೆಯಲ್ಲಿ ಅಲ್ಲವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News