×
Ad

ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ವಿರುದ್ಧ ತಾರತಮ್ಯ: ಪ್ರಧಾನಿಯ ಗಮನಸೆಳೆದ ಕಾಂಗ್ರೆಸ್ ಸಂಸದ ಅಧೀರ್‌ ರಂಜನ್ ಚೌಧರಿ

Update: 2025-12-30 22:00 IST

ಅಧೀರ ರಂಜನ್ | Photo Credit : PTI 

ಹೊಸದಿಲ್ಲಿ,ಡಿ.30: ಮಾಜಿ ಕಾಂಗ್ರೆಸ್ ಸಂಸದ ಅಧೀರ ರಂಜನ್ ಚೌಧರಿಯವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಭಾರತದ ಹಲವು ಭಾಗಗಳಲ್ಲಿ ಬಂಗಾಳಿ ಭಾಷಿಕ ವಲಸೆ ಕಾರ್ಮಿಕರ ವಿರುದ್ಧ ತಾರತಮ್ಯ ಮತ್ತು ಹಿಂಸಾಚಾರವನ್ನು ಪ್ರಸ್ತಾವಿಸಿದರು.

ಇಂತಹ ಘಟನೆಗಳನ್ನು ತಡೆಯುವಂತೆ ದೇಶದ ಎಲ್ಲ ಸರಕಾರಗಳಿಗೆ ಸೂಚಿಸುವಂತೆ ಪ್ರಧಾನಿಯವರನ್ನು ಆಗ್ರಹಿಸಿದ ಚೌಧರಿ,ಇಂತಹ ಹೆಚ್ಚಿನ ಘಟನೆಗಳು ಬಿಜಿಪಿ ಆಡಳಿತದ ರಾಜ್ಯಗಳಲ್ಲಿಯೇ ನಡೆಯುತ್ತಿವೆ ಎಂದು ಬೆಟ್ಟು ಮಾಡಿದರು.

‘ಡಿ.24ರಂದು ಒಡಿಶಾದ ಸಂಬಲ್ಪುರದಲ್ಲಿ ಭೀಕರ ಘಟನೆಯೊಂದು ನಡೆದಿದ್ದು,ನನ್ನ ಜಿಲ್ಲೆ ಮುರ್ಷಿದಾಬಾದ್‌ನ ಜುಯೆಲ್ ರಾಣಾ ಎಂಬ ಯುವಕನನ್ನು ಬಾಂಗ್ಲಾದೇಶಿ ನುಸುಳುಕೋರ ಎಂದು ಆರೋಪಿಸಿ ಹತ್ಯೆ ಮಾಡಲಾಗಿದೆ. ಆತನ ಜೊತೆಯಲ್ಲಿದ್ದ ಇತರ ಇಬ್ಬರು ವಲಸೆ ಕಾರ್ಮಿಕರು ಪಾರಾಗಿ ಜೀವವುಳಿಸಿಕೊಂಡಿದ್ದಾರೆ ’ಎಂದು ಚೌಧುರಿ ಮೋದಿಯವರಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ವ್ಯಾಪಕ ತಾರತಮ್ಯವನ್ನು ಆರೋಪಿಸಿರುವ ಅವರು, ದೇಶದ ಉದ್ದಗಲಕ್ಕೂ ಹರಡಿರುವ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ವಿವಿಧ ರಾಜ್ಯಗಳಲ್ಲಿ,ನಿರ್ದಿಷ್ಟವಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೀವ್ರ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಬಂಗಾಳಿ ಕಾರ್ಮಿಕರ ಭಾಷೆಯಿಂದಾಗಿ ಅವರನ್ನು ಬಾಂಗ್ಲಾದೇಶಿಗಳೆಂದು ತಪ್ಪಾಗಿ ಗ್ರಹಿಸಿ ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ವಲಸೆ ಕಾರ್ಮಿಕರು ದೇಶದ ಯಾವುದೇ ಭಾಗದಲ್ಲಿ ವಾಸವಿರುವ,ಕೆಲಸ ಮಾಡುವ,ಭೇಟಿ ನೀಡುವ ಹಕ್ಕು ಹೊಂದಿದ್ದಾರೆ ಎಂದು ಒತ್ತಿ ಹೇಳಿರುವ ಚೌಧುರಿ,ಕೇಂದ್ರವು ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News