ಅಮೆರಿಕದ ಒತ್ತಡದಿಂದ 1988ರಲ್ಲಿ ಭಾರತವು ಪಾಕ್ ಜೊತೆ ಪರಮಾಣು ಒಪ್ಪಂದ ಮಾಡಿಕೊಂಡಿದೆ: ಬಿಜೆಪಿ ಆರೋಪ
ಬಿಜೆಪಿ ಸಂಸದ ನಿಶಿಕಾಂತ ದುಬೆ | PTI
ಹೊಸದಿಲ್ಲಿ: ಭಾರತವು 1988ರಲ್ಲಿ ಅಮೆರಿಕದ ಒತ್ತಡಕ್ಕೆ ಒಳಗಾಗಿ ಪಾಕಿಸ್ತಾನದ ಜೊತೆ ಪರಮಾಣು ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ ದುಬೆ ಗುರುವಾರ ಆರೋಪಿಸಿದ್ದಾರೆ.
ಅಮೆರಿಕದ ಅಂದಿನ ಅಧ್ಯಕ್ಷ ರೊನಾಲ್ಡ್ ರೇಗನ್ ಅಂದಿನ ಪ್ರಧಾನಿ ರಾಜೀವ್ ಗಾಂಧಿಗೆ ಬರೆದಿರುವರು ಎನ್ನಲಾದ ಪತ್ರವೊಂದನ್ನು ಬಿಡುಗಡೆಗೊಳಿಸಿದ ದುಬೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಮಾತುಕತೆಯ ಕಾರ್ಯಸೂಚಿಯನ್ನು ಅಮೆರಿಕ ನಿಗದಿಪಡಿಸಿತ್ತು ಎಂದು ಆರೋಪಿಸಿದರು.
‘‘ಕಾಂಗ್ರೆಸ್‌ಗೆ ಕೋಪ ಯಾಕೆ ಬರುತ್ತದೆ? ನಾನು ಈ ಪತ್ರವನ್ನು ನೋಡಿದೆ, ನನಗೆ ನಾಚಿಕೆಯಾಯಿತು. ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಈ ಪತ್ರ/ಟೆಲಿಗ್ರಾಮನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿಗೆ ಕಳುಹಿಸಿದ್ದರು. ಅಮೆರಿಕದ ಒತ್ತಡದಲ್ಲಿ ಭಾರತವು ಪಾಕಿಸ್ತಾನದ ಅಧ್ಯಕ್ಷ ಜನರಲ್ ಝಿಯಾ ಜೊತೆಗೆ ಮಾತುಕತೆ ನಡೆಸಿತ್ತು. ಮಾತುಕತೆಯ ಕಾರ್ಯಸೂಚಿಯನ್ನು ಅಮೆರಿಕದ ಅಧ್ಯಕ್ಷರು ನಿಗದಿಪಡಿಸಿದ್ದರು. ಈ ಪತ್ರವನ್ನು ಓದಿದ ಬಳಿಕ ನಾನು ಅರ್ಥ ಮಾಡಿಕೊಂಡಿದ್ದೇನೆಂದರೆ, 1988ರಲ್ಲಿ ಭಾರತ ಮತ್ತು ಪಾಕಿಸ್ತಾನವು ಅಮೆರಿಕದ ಒತ್ತಡದಲ್ಲಿ ಪರಮಾಣು ಒಪ್ಪಂದ ಮಾಡಿಕೊಂಡಿತ್ತು’’ ಎಂದು ಗೊಡ್ಡ ಸಂಸದ ದುಬೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಝೀರ್ ಭುಟ್ಟೊ ಮತ್ತು ರಾಜೀವ್ ಗಾಂಧಿ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದರು. ಪರಮಾಣು ಶಸ್ತ್ರಗಳನ್ನು ಕಡಿಮೆಗೊಳಿಸಬೇಕು ಅಥವಾ ಸೀಮಿತಗೊಳಿಸಬೇಕು ಎಂಬುದಾಗಿ ಒಪ್ಪಂದವು ಉಭಯ ದೇಶಗಳಿಗೆ ಕರೆ ನೀಡುತ್ತದೆ. ಪರಸ್ಪರರ ಪರಮಾಣು ಸಂಸ್ಥಾಪನೆಗಳ ಮೇಲೆ ದಾಳಿ ನಡೆಸಬಾರದು ಅಥವಾ ದಾಳಿ ನಡೆಸಲು ವಿದೇಶಗಳಿಗೆ ನೆರವು ನೀಡಬಾರದು ಎಂಬುದಾಗಿಯೂ ಒಪ್ಪಂದವು ಭಾರತ ಮತ್ತು ಪಾಕಿಸ್ತಾನಕ್ಕೆ ಕರೆ ನೀಡುತ್ತದೆ.
1991ರ ಜನವರಿಯಲ್ಲಿ ಉಭಯ ದೇಶಗಳ ಸಂಸತ್‌ಗಳು ಪರಮಾಣು ಒಪ್ಪಂದವನ್ನು ಅನುಮೋದಿಸಿದವು.
►ರೇಗನ್ ಅಫ್ಘಾನಿಸ್ತಾನದಲ್ಲಿ ಭಾರತದ ನೆರವು ಕೋರಿದ್ದರು; ಇಂದು ಟ್ರಂಪ್ ಮೋದಿಯನ್ನು ಬೆದರಿಸುತ್ತಾರೆ: ಕಾಂಗ್ರೆಸ್
ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್‌ರ ಒತ್ತಡದಿಂದಾಗಿ ಭಾರತವು 1988ರಲ್ಲಿ ಪಾಕಿಸ್ತಾನದ ಜೊತೆಗೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತ್ತು ಎಂಬ ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ ಹಾಗೂ ಬಿಜೆಪಿಯು ಕಾಂಗ್ರೆಸ್‌ಗೆ ಅನಿರೀಕ್ಷಿತವಾಗಿ ಉತ್ತಮ ಪ್ರಚಾರ ನೀಡಿದೆ ಎಂದು ಬಣ್ಣಿಸಿದೆ.
‘‘ಬಿಜೆಪಿಯು ಕಾಂಗ್ರೆಸ್‌ಗೆ ನೀಡುವಷ್ಟು ಪ್ರಚಾರವನ್ನು ನೀಡಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ನಾವು ಬಿಜೆಪಿಗೆ ಆಭಾರಿಯಾಗಿದ್ದೇವೆ’’ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.
‘‘ಅಮೆರಿಕ ಅಧ್ಯಕ್ಷ ರೇಗನ್, ರಾಜೀವ್ ಗಾಂಧಿಗೆ ಬರೆದ ಪತ್ರವನ್ನು ಓದಿದರೆ, ಅಧ್ಯಕ್ಷ ರೇಗನ್ ಅಫ್ಘಾನಿಸ್ತಾನದಲ್ಲಿ ನಮ್ಮ ಸಹಾಯವನ್ನು ಕೋರುವುದು ನಮ್ಮ ಗಮನಕ್ಕೆ ಬರುತ್ತದೆ. ಅಂದಿನ ಭಾರತಕ್ಕೆ ಆ ಪಾತ್ರವನ್ನು ವಹಿಸುವ ಸಾಮರ್ಥ್ಯವಿತ್ತು ಎನ್ನುವುದು ಗೊತ್ತಾಗುತ್ತದೆ. ‘ನಿಮಗೆ ನೆರವು ನೀಡಲು ಸಿದ್ಧನಿದ್ದೇನೆ’ ಎಂಬ ರೇಗನ್‌ರ ವಿನೀತ ಭಾಷೆಯನ್ನು ಗಮನಿಸಬಹುದಾಗಿದೆ’’ ಎಂದು ಪವನ್ ಖೇರಾ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಇಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ‘‘ಬೆದರಿಸುತ್ತಾರೆ’’ ಎಂದು ಹೇಳಿಕೊಂಡ ಖೇರಾ, ಈ ‘‘ಬೆದರಿಕೆ’’ಯನ್ನು ಭಾರತೀಯ ಪ್ರಧಾನಿ ಮೌನವಾಗಿ ಸ್ವೀಕರಿಸುತ್ತಾರೆ ಎಂದರು.