ಹಣ ಅಕ್ರಮ ವರ್ಗಾವಣೆ ಪ್ರಕರಣ : ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ನಟಿ ಜಾಕ್ವೆಲಿನ್ ಫೆರ್ನಾಂಡಿಸ್ | PC : instagram.com \ Jacqueline Fernandez
ಹೊಸದಿಲ್ಲಿ,ಸೆ. 22: ವಂಚಕ ಸುಕೇಶ್ ಚಂದ್ರಶೇಖರ್ ಭಾಗಿಯಾಗಿದ್ದಾನೆ ಎಂದು ಹೇಳಲಾದ 200 ಕೋ.ರೂ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಾಖಲಿಸಲಾದ ಇಸಿಐಆರ್ (ಎಫ್‌ಐಆರ್‌ಗೆ ಸಮಾನವಾದುದು) ರದ್ದುಗೊಳಿಸುವಂತೆ ಕೋರಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿ ಹೈಕೋರ್ಟ್ ನೀಡಿದ ಆದೇಶದಲ್ಲಿ ಹಸ್ತಕ್ಷೇಪ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
‘‘ನೀವು ಈ ಅರ್ಜಿಯನ್ನು ಹಿಂಪಡೆಯಿರಿ. ಸೂಕ್ತ ಸಮಯದಲ್ಲಿ ಸಲ್ಲಿಸಿ. ಇದು ಉತ್ತಮ ಆಯ್ಕೆಯಾಗಿರುತ್ತದೆ. ನಾವು ಈ ಹಂತದಲ್ಲಿ ಮಧ್ಯಪ್ರವೇಶಿಸುವುದಿಲ್ಲ’’ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಆಗಸ್ಟಿಸನ್ ಜಾರ್ಜ್ ಮಸೀಹಾ ಅವರನ್ನು ಒಳಗೊಂಡ ಪೀಠ ಫೆರ್ನಾಂಡಿಸ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಅವರಿಗೆ ತಿಳಿಸಿತು.
200ಕೋ.ರೂ. ಹಣ ಅಕ್ರಮ ವರ್ಗಾವಣೆಯಲ್ಲಿ ಚಂದ್ರಶೇಖರ್‌ಗೆ ಫೆರ್ನಾಂಡಿಸ್ ನೆರವು ನೀಡಿದ್ದಾರೆ ಎಂಬ ಯಾವುದೇ ಆರೋಪ ಇಲ್ಲ ಎಂದು ರೋಹ್ಟಗಿ ಪೀಠಕ್ಕೆ ತಿಳಿಸಿದರು.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಸಿಐಆರ್ ಅನ್ನು ರದ್ದುಗೊಳಿಸುವಂತೆ ಕೋರಿದ ಫೆರ್ನಾಂಡಿಸ್ ಅವರ ಅರ್ಜಿಯನ್ನು ತಿರಸ್ಕರಿಸಿ ದಿಲ್ಲಿ ಉಚ್ಚ ನ್ಯಾಯಾಲಯ ಜುಲೈ 3ರಂದು ಆದೇಶ ನೀಡಿತ್ತು. ಈ ಆದೇಶವನ್ನು ಫೆರ್ನಾಂಡಿಸ್ ಅವರು ನ್ಯಾಯವಾದಿ ಸುಮೀರ್ ಸೋಧಿ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಪ್ರಶ್ನಿಸಿದ್ದರು.