ಭಾರತ - ಪಾಕ್ ಸೇನೆಗಳ ನಡುವಿನ ನೇರ ಮಾತುಕತೆಯ ಮೂಲಕ ಯುದ್ಧವಿರಾಮ: ಜೈಶಂಕರ್
ಜೈಶಂಕರ್ | PC : PTI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಿರಾಮವನ್ನು ಏರ್ಪಡಿಸುವ ಮೇ 10ರ ನಿರ್ಧಾರವನ್ನು ಉಭಯ ದೇಶಗಳ ಸೇನೆಗಳು ‘‘ನೇರವಾಗಿ ಮಾತುಕತೆ ನಡೆಸಿ’’ ತೆಗೆದುಕೊಂಡವು ಮತ್ತು ಅದರಲ್ಲಿ ಇತರ ಯಾವುದೇ ದೇಶವು ಪಾಲ್ಗೊಂಡಿಲ್ಲ ಎಂದು ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶುಕ್ರವಾರ ಹೇಳಿದ್ದಾರೆ.
ಮೇ 10ರ ಬೆಳಗ್ಗೆ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯು ಮಾರಕವಾಗಿತ್ತು. ಅದರ ಪರಿಣಾಮವಾಗಿ ನಾಲ್ಕು ದಿನಗಳ ಸಂಘರ್ಷಕ್ಕೆ ತೆರೆ ಎಳೆಯುವ ಅನಿವಾರ್ಯತೆ ಪಾಕಿಸ್ತಾನಕ್ಕೆ ಎದುರಾಯಿತು ಎಂದು ಡೆನ್ಮಾರ್ಕ್‌ನ ಸುದ್ದಿವಾಹಿನಿ ಟಿವಿ 2ಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಜೈಶಂಕರ್ ಹೇಳಿದರು. ಯುದ್ಧವಿರಾಮವನ್ನು ಏರ್ಪಡಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪಾತ್ರದ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವಿರಾಮದಲ್ಲಿ ತಾನು ಪ್ರಮುಖ ಪಾತ್ರ ವಹಿಸಿರುವುದಾಗಿ ಟ್ರಂಪ್ ಪದೇ ಪದೇ ಹೇಳಿದ್ದಾರೆ. ಉಭಯ ದೇಶಗಳ ನಡುವಿನ ಯುದ್ಧವನ್ನು ನಿಲ್ಲಿಸಲು ತಾನು ವ್ಯಾಪಾರವನ್ನು ಬಳಸಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.
‘‘ಕೆಲವು ದಿನಗಳ ಕಾಲ ಸಂಘರ್ಷ ನಡೆಯಿತು. ಯುದ್ಧ ಮತ್ತು ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವ ಒಪ್ಪಂದವೊಂದರ ಮೂಲಕ ಸೇನಾ ರೂಪದ ಸಂಘರ್ಷಕ್ಕೆ ತಾತ್ಕಾಲಿಕ ತಡೆ ಹೇರಲು ನಾವು ಒಪ್ಪಿಕೊಂಡೆವು. ಇದನ್ನು ನಾವು ಉಭಯ ದೇಶಗಳ ಸೇನೆಗಳ ನಡುವಿನ ನೇರ ಮಾತುಕತೆಯ ಮೂಲಕ ಸಾಧಿಸಿದೆವು’’ ಎಂದು ಜೈಶಂಕರ್ ಒತ್ತಿ ಹೇಳಿದರು.