Kashmir | ಭಾರತ–ಪಾಕ್ ಸೈನಿಕರಿಂದ ಗುಂಡಿನ ಚಕಮಕಿ
Photo Credit : PTI
ಹೊಸದಿಲ್ಲಿ, ಜ. 21: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರನ್ ವಲಯದಲ್ಲಿ ಮಂಗಳವಾರ–ಬುಧವಾರ ರಾತ್ರಿ ಭಾರತ ಮತ್ತು ಪಾಕಿಸ್ತಾನಿ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಗಡಿ ಭದ್ರತೆಯನ್ನು ಬಿಗಿಗೊಳಿಸುವುದು ಮತ್ತು ನಿಯಂತ್ರಣ ರೇಖೆಯಲ್ಲಿನ ಅಗೋಚರ ಸ್ಥಳಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಕೆರನ್ ನ ಬಾಲಾ ಪ್ರದೇಶದಲ್ಲಿ ಹೆಚ್ಚಿನ ಸಾಮರ್ಥ್ಯದ ನಿಗಾ ಕ್ಯಾಮೆರಾಗಳನ್ನು 6 ರಾಷ್ಟ್ರೀಯ ರೈಫಲ್ಸ್ ಸೈನಿಕರು ಅಳವಡಿಸುತ್ತಿದ್ದಾಗ ಘರ್ಷಣೆ ನಡೆದಿದೆ.
ಕ್ಯಾಮೆರಾ ಅಳವಡಿಕೆಯನ್ನು ತಡೆಯುವ ಉದ್ದೇಶದಿಂದ ಪಾಕಿಸ್ತಾನಿ ಪಡೆಗಳು ಸಣ್ಣ ಶಸ್ತ್ರಗಳಿಂದ ಎರಡು ಸುತ್ತು ಗುಂಡು ಹಾರಿಸಿದವು ಎನ್ನಲಾಗಿದೆ. ಅದಕ್ಕೆ ಪ್ರತಿಯಾಗಿ ಭಾರತೀಯ ಪಡೆ ಒಂದು ಸುತ್ತು ಗುಂಡು ಹಾರಿಸಿದೆ.
ಉಭಯ ಕಡೆಗಳಿಂದ ಯಾವುದೇ ಸಾವು–ನೋವು ವರದಿಯಾಗಿಲ್ಲ. ಆದರೆ, ಭಯೋತ್ಪಾದಕರನ್ನು ಭಾರತೀಯ ಪ್ರದೇಶದೊಳಗೆ ನುಗ್ಗಿಸುವ ಉದ್ದೇಶದಿಂದ ಭಾರತೀಯ ಸೈನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವೂ ಇದಾಗಿರಬಹುದೆಂಬ ಸಾಧ್ಯತೆಯನ್ನು ಸೈನಿಕರು ತಳ್ಳಿಹಾಕಿಲ್ಲ. ಈ ಹಿನ್ನೆಲೆಯಲ್ಲಿ ದಟ್ಟ ಅರಣ್ಯ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.