19 ರಾಜ್ಯಗಳಲ್ಲಿ ಭೂಆಸ್ತಿ ನಕ್ಷೆಗಳು ಡಿಜಿಟಲ್!
ಮನೆಯಿಂದಲೇ ಭೂದಾಖಲೆಗಳ ಡೌನ್‌ಲೋಡ್‌ಗೆ ಅವಕಾಶ
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಡಿ. 2: ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ 19 ರಾಜ್ಯಗಳ 406 ಜಿಲ್ಲೆಗಳಲ್ಲಿ ಭಾರತೀಯ ಪೌರರು ಇನ್ನುಮುಂದೆ ಡಿಜಿಟಲ್ ರೂಪದಲ್ಲಿ ಸಹಿ ಮಾಡಲಾದ, ಕಾನೂನುಬದ್ಧ ಭೂ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಅಲ್ಲದೆ, ಭೂ ಅಡಮಾನಗಳನ್ನು ಆನ್‌ಲೈನ್ ಮೂಲಕವೇ ದೃಢಪಡಿಸಿಕೊಳ್ಳಬಹುದಾಗಿದೆ. ಇದರಿಂದ ಸಾಲದ ಸೌಲಭ್ಯ ಪಡೆಯುವ ಪ್ರಕ್ರಿಯೆಯನ್ನು ಗಣನೀಯವಾಗಿ ತ್ವರಿತಗೊಳಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಭೂ ದಾಖಲೆಗಳ ಡಿಜಿಟಲೀಕರಣದ ಪ್ರಮುಖ ಹಂತಗಳನ್ನು ಭೂಸಂಪನ್ಮೂಲಗಳ ಇಲಾಖೆ ಬಹುತೇಕ ಪೂರ್ಣಗೊಳಿಸಿದ್ದು, ಆ ಮೂಲಕ ಭೂ ಆಡಳಿತವನ್ನು ‘ಇನ್ ಲೈನ್’ನಿಂದ ‘ಆನ್‌ಲೈನ್’ಗೆ ವರ್ಗಾಯಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
‘‘ಶೇ.97.27 ಗ್ರಾಮಗಳಲ್ಲಿ ಭೂಹಕ್ಕುಗಳ ದಾಖಲೆಗಳ ಕಂಪ್ಯೂಟರೀಕರಣವನ್ನು ಪೂರ್ಣಗೊಳಿಸಲಾಗಿದೆ. ದೇಶದ ಶೇ.97.14 ಗ್ರಾಮಗಳಲ್ಲಿ ಆಸ್ತಿ ನಕ್ಷೆಗಳನ್ನು ಡಿಜಿಟಲೀಕರಿಸಲಾಗಿದೆ. ಸುಮಾರು ಶೇ.84.89 ಗ್ರಾಮಗಳಲ್ಲಿ ಭೂಹಕ್ಕುಗಳ ದಾಖಲೆಗಳನ್ನು ಡಿಜಿಟಲ್ ಆಸ್ತಿ ನಕ್ಷೆಗಳೊಂದಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ’’ ಎಂದು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.
ನಗರ ಪ್ರದೇಶಗಳಲ್ಲಿ ಭೂದಾಖಲೆಗಳ ನಿರ್ವಹಣೆಯಲ್ಲಿನ ಸಂಕೀರ್ಣತೆಗಳನ್ನು ಪರಿಹರಿಸಲು ಭೂಸರ್ವೇಕ್ಷಣೆ ಆಧಾರಿತ ‘ನಕ್ಷಾ’ ಪೈಲಟ್ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು, ಅದು 157 ನಗರಾಡಳಿತ ಸಂಸ್ಥೆಗಳಲ್ಲಿ ತ್ವರಿತ ಪ್ರಗತಿ ಸಾಧಿಸಿದೆ.
116 ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಭೂಸರ್ವೇಕ್ಷಣೆಗಾಗಿ ವೈಮಾನಿಕ ಹಾರಾಟವನ್ನು ಪೂರ್ಣಗೊಳಿಸಲಾಗಿದ್ದು, ಇದು 5,915 ಚದರ ಕಿ.ಮೀ. ವಿಸ್ತೀರ್ಣದ ಉನ್ನತ ರೆಸಲ್ಯೂಶನ್ ಚಿತ್ರಗಳನ್ನು ಒಳಗೊಂಡಿದೆ.
‘ನಕ್ಷಾ’ ಕಾರ್ಯಕ್ರಮದ ನಿರ್ದಿಷ್ಟ ಮೈಲುಗಲ್ಲುಗಳನ್ನು ಸಾಧಿಸಲು 24 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 1,050 ಕೋಟಿ ರೂ. ನಿಧಿಯನ್ನು ಒದಗಿಸಲು ಇಲಾಖೆ ಶಿಫಾರಸು ಮಾಡಿತ್ತು.
ಅಲ್ಲದೆ, ಆಸ್ತಿಗಳಿಗೆ 14 ಅಂಕಿಗಳ ವಿಶಿಷ್ಟ ಭೂ ಭಾಗ ಗುರುತು ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಸಚಿವಾಲಯದ ಪ್ರಕಾರ, ರಾಷ್ಟ್ರೀಯ ಜೆನೆರಿಕ್ ದಾಖಲೆ ನೋಂದಣಿ ವ್ಯವಸ್ಥೆ (ಎನ್‌ಜಿಡಿಆರ್‌ಎಸ್) ಅನ್ನು ಏಕರೂಪಗೊಳಿಸಲಾಗಿದ್ದು, ಉದ್ಯಮವನ್ನು ಸುಲಭವಾಗಿ ನಡೆಸಲು ಇದು ಉತ್ತೇಜನ ನೀಡಲಿದೆ.
ದೇಶದ ಸುಮಾರು ಶೇ.88.6 ಸಬ್‌ರಿಜಿಸ್ಟ್ರಾರ್ ಕಚೇರಿಗಳನ್ನು ಭೂಕಂದಾಯ ಕಚೇರಿಗಳೊಂದಿಗೆ ಸಮನ್ವಯಗೊಳಿಸಲಾಗಿದೆ. ಇದರೊಂದಿಗೆ ನೋಂದಣಿಯ ಬಳಿಕ ಭೂದಾಖಲೆಗಳ ಸ್ವಯಂಚಾಲಿತ ಮ್ಯುಟೇಶನ್‌ಗೆ ಅವಕಾಶ ಕಲ್ಪಿಸಲಾಗಿದೆ.