×
Ad

ಮಾ.11ರಂದು ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ : ಚುನಾವಣೆ ಹೊಸ್ತಿಲಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Update: 2026-03-09 19:59 IST

 ನರೇಂದ್ರ ಮೋದಿ | Photo Credit ; PTI 

ಹೊಸದಿಲ್ಲಿ,ಮಾ.9: ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಸನ್ನಿಹಿತವಾಗಿರುವ ಕೇರಳಕ್ಕೆ ಮಾ.11ರಂದು ಒಂದು ದಿನದ ಭೇಟಿ ನೀಡಲಿದ್ದಾರೆ.

ಮೋದಿ ರಾಜ್ಯದ ಅತಿ ದೊಡ್ಡ ನಗರ ಮತ್ತು ಆರ್ಥಿಕ ಕೇಂದ್ರವಾಗಿರುವ ಕೊಚ್ಚಿಯಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮರೀನ್ ಡ್ರೈವ್‌ನಲ್ಲಿ ಆಯೋಜಿತ ಅಖಿಲ ಭಾರತ ಕೇರಳ ಧೀವರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ ಕಳೂರ್ ಕ್ರೀಡಾಂಗಣದಲ್ಲಿ ಎನ್‌ಡಿಎ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡುವ ಮುನ್ನ ನಗರದಲ್ಲಿ ಹಲವಾರು ರೈಲ್ವೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅವರು ರ್ಯಾಲಿಗೆ ಮುನ್ನ ಸಣ್ಣ ರೋಡ್ ಶೋ ನಡೆಸುವ ಸಾಧ್ಯತೆಯೂ ಇದೆ. ರ್ಯಾಲಿಯಲ್ಲಿ 40,000ಕ್ಕೂ ಅಧಿಕ ಬೆಂಬಲಿಗರು ಸೇರುವ ನಿರೀಕ್ಷೆಯಿದೆ.

ಫೆ.25ರಂದು ಕೇಂದ್ರ ಸಂಪುಟವು ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದ ಕೆಲವೇ ದಿನಗಳ ಬಳಿಕ ಇದು ಕೇರಳಕ್ಕೆ ಮೋದಿಯವರ ಮೊದಲ ಭೇಟಿಯಾಗಿದೆ.

ಈ ವರ್ಷದ ಎಪ್ರಿಲ್-ಮೇ ತಿಂಗಳಿನಲ್ಲಿ ತಮಿಳುನಾಡು, ಅಸ್ಸಾಂ, ಪುದುಚೇರಿ ಮತ್ತು ಪಶ್ಚಿಮ ಬಂಗಾಳಗಳ ಜೊತೆ ಕೇರಳದಲ್ಲಿಯೂ ವಿಧಾನಸಭಾ ಚುನಾವಣೆ ನಡೆಯಲಿದೆ. ಪ್ರಸ್ತುತ 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕರಿಲ್ಲ. ಆದಾಗ್ಯೂ 2024ರ ಲೋಕಸಭಾ ಚುನಾವಣೆಯಲ್ಲಿ ಜನಪ್ರಿಯ ಮಲಯಾಳಂ ನಟ ಸುರೇಶ್‌ ಗೋಪಿ ಅವರು ತ್ರಿಶೂರಿನಲ್ಲಿ 75,000ಕ್ಕೂ ಅಧಿಕ ಮತಗಳಿಂದ ಜಯಶಾಲಿಯಾಗುವ ಮೂಲಕ ಬಿಜೆಪಿ ಪ್ರಮುಖ ಗೆಲುವನ್ನು ಸಾಧಿಸಿತ್ತು. ಇದು ಸಾಂಪ್ರದಾಯಿಕವಾಗಿ ಕಾಂಗ್ರೆಸ್-ಎಡರಂಗ ಪ್ರಾಬಲ್ಯದ ರಾಜ್ಯವಾಗಿರುವ ಕೇರಳದಲ್ಲಿ ಬಿಜೆಪಿಯ ಮೊದಲ ಲೊಕಸಭಾ ವಿಜಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News