ಇರಾನ್ ದಾಳಿ | 12 ಕ್ಷಿಪಣಿಗಳು, 17 ಡ್ರೋನ್ ಗಳನ್ನು ತಡೆದ ಯುಎಇ
ಸಾಂದರ್ಭಿಕ ಚಿತ್ರ | Photo Credit : PTI , AP
ಅಬುಧಾಬಿ: ಇರಾನ್ ನಿಂದ ಉಡಾಯಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಡ್ರೋನ್ ಗಳನ್ನು ಯುಎಇ ವಾಯು ರಕ್ಷಣಾ ವ್ಯವಸ್ಥೆ ತಡೆಹಿಡಿದಿರುವುದಾಗಿ ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಯುಎಇ ವಾಯು ರಕ್ಷಣಾ ಪಡೆಗಳು ಸೋಮವಾರ ಒಟ್ಟು 15 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಿದ್ದು, ಅವುಗಳಲ್ಲಿ 12 ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ. ಉಳಿದ ಮೂರು ಕ್ಷಿಪಣಿಗಳು ಸಮುದ್ರದಲ್ಲಿ ಬಿದ್ದಿವೆ ಎಂದು ಸಚಿವಾಲಯ ಹೇಳಿದೆ.
ಇದೇ ವೇಳೆ, ಒಟ್ಟು 18 ಡ್ರೋನ್ ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳಲ್ಲಿ 17 ಅನ್ನು ವಾಯು ರಕ್ಷಣಾ ವ್ಯವಸ್ಥೆ ತಡೆಹಿಡಿದಿದೆ. ಒಂದು ಡ್ರೋನ್ ಯುಎಇ ಪ್ರದೇಶದಲ್ಲಿ ಅಪ್ಪಳಿಸಿದೆ. ಆದರೆ ಆ ಘಟನೆಗೆ ಸಂಬಂಧಿಸಿದ ವಿವರಗಳನ್ನು ಸಚಿವಾಲಯ ಬಹಿರಂಗಪಡಿಸಿಲ್ಲ.
ಇತ್ತೀಚಿನ ದಾಳಿಗಳೊಂದಿಗೆ, ಇರಾನ್ನಲ್ಲಿ ಯುದ್ಧ ಆರಂಭವಾದ ಬಳಿಕ ಯುಎಇ ಕಡೆಗೆ ಉಡಾಯಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಒಟ್ಟು ಸಂಖ್ಯೆ 253 ಕ್ಕೆ ತಲುಪಿದೆ. ಇದೇ ಅವಧಿಯಲ್ಲಿ ಒಟ್ಟು 1,440 ಡ್ರೋನ್ ಗಳನ್ನು ಉಡಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 28ರಿಂದ ನಡೆದ ದಾಳಿಗಳ ಸರಣಿಯಲ್ಲಿ ಇದುವರೆಗೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.