ಮಧ್ಯಪ್ರದೇಶ | ಅಣೆಕಟ್ಟು ಯೋಜನೆಯಿಂದ ಹುಲಿ ಕಾರಿಡಾರ್ ಮುಳುಗಡೆಯಾಗಲಿದೆ: NTCA ಎಚ್ಚರಿಕೆ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮಧ್ಯಪ್ರದೇಶದಲ್ಲಿ ಮೊರಾಂಡ್-ಗಾಂಜಾಲ್ ನೀರಾವರಿ ಯೋಜನೆಯ ನಿರ್ಮಾಣದಿಂದ ಮೀಸಲು ಅರಣ್ಯಗಳ ನಡುವೆ ಹುಲಿಗಳು ಓಡಾಡಲು ಬಳಸುವ ಅರಣ್ಯ ಪ್ರದೇಶಗಳು ಮುಳುಗಡೆಯಾಗುವ ಆತಂಕ ಎದುರಾಗಿದೆ. ಈ ಬಗ್ಗೆ ಎಚ್ಚರಿಸಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು, ಪರ್ಯಾಯ ಸ್ಥಳಗಳನ್ನು ಗುರುತಿಸಬೇಕು ಎಂದು ಬಲವಾಗಿ ಶಿಫಾರಸು ಮಾಡಿರುವುದು ಸರಕಾರಿ ದಾಖಲೆಗಳಿಂದ ವ್ಯಕ್ತವಾಗಿದೆ.
ಜನವರಿ 27ರಂದು ನಡೆದಿದ್ದ ಸಭೆಯಲ್ಲಿ ಯೋಜನೆಗಾಗಿ 2,250.05 ಹೆಕ್ಟೇರ್ ಅರಣ್ಯ ಭೂಮಿಯನ್ನು ವರ್ಗಾಯಿಸುವ ಪ್ರಸ್ತಾವದ ಕುರಿತು ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿಯು ಚರ್ಚಿಸಿತ್ತು.
ಮಧ್ಯಪ್ರದೇಶದ ಹೊಶಂಗಬಾದ್, ಬೆತುಲ್, ಹರ್ದಾ ಹಾಗೂ ಖಾಂಡ್ವಾದಲ್ಲಿ ನೀರಾವರಿಯನ್ನು ಸುಧಾರಿಸಲು ಮೊರಾಂಡ್ ಹಾಗೂ ಗಾಂಜಾಲ್ ನದಿಗಳಿಗೆ ಎರಡು ಅಣೆಕಟ್ಟುಗಳನ್ನು ನಿರ್ಮಿಸುವ ಯೋಜನೆಯನ್ನು ಈ ಪ್ರಸ್ತಾವ ಹೊಂದಿದೆ.
ಸಭೆಯ ಟಿಪ್ಪಣಿಗಳ ಪ್ರಕಾರ, ಈ ಯೋಜನೆಯು ಸತ್ಪುರದಿಂದ ಮೇಲ್ಘಟ್ ನಡುವಿನ ಹುಲಿ ಮೀಸಲು ಅರಣ್ಯದಲ್ಲಿನ ಮಹತ್ವದ ಹುಲಿ ಕಾರಿಡಾರ್ ಅನ್ನು ನಾಶಗೊಳಿಸಲಿದೆ ಹಾಗೂ ಇನ್ನಿತರ ವನ್ಯಜೀವಿಗಳು ಹಾಗೂ ಜೀವ ವೈವಿಧ್ಯಗಳಿಗೆ ಬೆದರಿಕೆ ಒಡ್ಡಲಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಎಚ್ಚರಿಸಿದೆ.
2022ರ ರಾಷ್ಟ್ರೀಯ ಹುಲಿ ಅಂದಾಜನ್ನು ಆಧರಿಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಾಡಿರುವ ವಿಶ್ಲೇಷಣೆಯ ಪ್ರಕಾರ, ಯೋಜನಾ ಸ್ಥಳವು ಹುಲಿಗಳು ಆಕ್ರಮಿಸಿರುವ ಮಹತ್ವದ ಆವಾಸ ಸ್ಥಾನದ ಭಾಗವಾಗಿದೆ.
ಈ ಅಣೆಕಟ್ಟೆಗಳು ಮೀಸಲು ಅರಣ್ಯಗಳ ನಡುವಿನ ಹುಲಿಗಳ ಓಡಾಟಕ್ಕೆ ಅತ್ಯಗತ್ಯವಾಗಿರುವ ಅರಣ್ಯ ಪ್ರದೇಶಗಳನ್ನು ಮುಳುಗಡೆ ಮಾಡಲಿದ್ದು, ಇದರಿಂದ ಅನುವಂಶಿಕ ವಿನಿಮಯ ಹಾಗೂ ಸಂಖ್ಯೆಯ ಸ್ಥಿರತೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಈ ವಿಶ್ಲೇಷಣೆಯಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ, ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಸ್ಥಳ ಪರಿಶೀಲನೆ ನಡೆಸುವಂತೆ ಅರಣ್ಯ ಸಲಹಾ ಸಮಿತಿಯು ಉಪ ಸಮಿತಿಗೆ ಶಿಫಾರಸು ಮಾಡಿದೆ. ಈ ಉಪ ಸಮಿತಿಯು ಪರಿಸರ ಸಚಿವಾಲಯ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳು ಹಾಗೂ ಮಣ್ಣು ಸಂರಕ್ಷಣಾ ತಜ್ಞರನ್ನು ಒಳಗೊಂಡಿರಲಿದೆ.