ಮಧ್ಯಪ್ರದೇಶ: ಆರ್ಕೆಸ್ಟ್ರಾ ಡ್ಯಾನ್ಸರ್ ಮೇಲೆ ಸಾಮೂಹಿಕ ಅತ್ಯಾಚಾರ; 6 ಜನರ ಬಂಧನ
ಸಾಂದರ್ಭಿಕ ಚಿತ್ರ
ಭೋಪಾಲ: ಮಧ್ಯಪ್ರದೇಶದ ಸಿಂಗ್ರಾಲಿ ಎಂಬಲ್ಲಿ 22 ವರ್ಷದ ಆರ್ಕೆಸ್ಟ್ರಾ ಡ್ಯಾನ್ಸರ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಪೊಲೀಸರು ಶುಕ್ರವಾರ ಆರು ಮಂದಿಯನ್ನು ಬಂಧಿಸಿದ್ದಾರೆ.
ಬುಧವಾರ ರಾತ್ರಿ ನಾಲ್ವರು ಮಹಿಳೆಯರು ಸೇರಿದಂತೆ ಎಂಟು ಮಂದಿಯ ಆರ್ಕೆಸ್ಟ್ರಾ ತಂಡವು ಶಿತುಲ್ ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿ ನಾಲ್ಕು ಬೈಕ್‌ಗಳಲ್ಲಿ ವಾಪಸಾಗುತ್ತಿತ್ತು. ಬೈಕ್‌ಗಳಲ್ಲಿ ಅವರನ್ನು ಹಿಂಬಾಲಿಸಿ ಬಂದ ಆರೋಪಿಗಳು ನಾಲ್ಕನೇ ಬೈಕನ್ನು ತಡೆದು ನಿಲ್ಲಿಸಿದರು. ಆ ಬೈಕ್‌ನಲ್ಲಿ ಸಂತ್ರಸ್ತೆ ಮತ್ತು ಓರ್ವ ಪುರುಷ ಇದ್ದರು.
‘‘ನೃತ್ಯ ಕಾರ್ಯಕ್ರಮದ ಬಳಿಕ, 22 ವರ್ಷದ ಮಹಿಳೆಯು ಬೈಕೊಂದರಲ್ಲಿ ತನ್ನ ಸ್ನೇಹಿತನ ಜೊತೆ ವಾಪಸಾಗುತ್ತಿದ್ದರು. ಆಗ ನಾಲ್ಕು ಬೈಕ್‌ಗಳಲ್ಲಿದ್ದ ಆರು ಮಂದಿ ಅವರನ್ನು ತಡೆಗಟ್ಟಿದರು. ಅವರು ಬೈಕ್ ಸವಾರನಿಗೆ ಹೊಡೆದು ಮಹಿಳೆಯನ್ನು ಸಮೀಪದ ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದರು’’ ಎಂದು ಸಿಂಗ್ರಾಲಿ ಪೊಲೀಸ್ ಸೂಪರಿಂಟೆಂಡೆಂಡ್ ಮನೀಶ್ ಖಾತ್ರಿ ಹೇಳಿದರು.
ಆರೋಪಿಗಳು ಮಹಿಳೆಯ ಫೋನ್ ಕಸಿದುಕೊಂಡು ಪರಾರಿಯಾದರು. ಮಹಿಳೆಯ ತಂಡದವರು ಮಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಅಲ್ಲಿಗೆ ಬರುವ ವೇಳೆಗೆ, ಸಂತ್ರಸ್ತ ಮಹಿಳೆಯು ಅಲ್ಲಿಂದ ತಪ್ಪಿಸಿಕೊಂಡು ತನ್ನ ಸಹೋದರಿಗೆ ಮಾಹಿತಿ ನೀಡಿದರು.
ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಇದ್ದ ಆರೋಪಿಗಳು ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದ ಹುಡುಗಿಯರಿಗೆ ಕೀಟಲೆ ಮಾಡುತ್ತಿದ್ದರು ಹಾಗೂ ಬಳಿಕ ಅವರನ್ನು ಹಿಂಬಾಲಿಸಿದರು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೊಲೀಸರು ಮಹಿಳೆಯ ರಕ್ಷಣೆಗೆ ಧಾವಿಸುವ ಬದಲು, ನಾವೇ ಏನೋ ಮಾಡಿದ್ದೇವೆ ಎಂದು ಆರೋಪಿಸಿ ಭದೌರ ಹೊರಠಾಣೆಯಲ್ಲಿ ನಮಗೆ ಹೊಡೆದರು ಎಂದು ಸಂತ್ರಸ್ತೆಯ ಸಂಗಡಿಗರು ಆರೋಪಿಸಿದ್ದಾರೆ.