ಸಹೋದರನೊಂದಿಗೆ ಜಗಳ: ತಂದೆಯ ಅಂತ್ಯಕ್ರಿಯೆ ನೆರವೇರಿಸಲು ಅರ್ಧ ಮೃತದೇಹಕ್ಕೆ ಬೇಡಿಕೆ ಇಟ್ಟ ಹಿರಿಯ ಪುತ್ರ!
ಸಾಂದರ್ಭಿಕ ಚಿತ್ರ (credit: X/Grok)
ಟಿಕಮ್ ಗಢ್: ತನ್ನ ಸಹೋದರನೊಂದಿಗಿನ ಕೌಟುಂಬಿಕ ವ್ಯಾಜ್ಯದ ಕಾರಣಕ್ಕೆ ವ್ಯಕ್ತಿಯೊಬ್ಬ ಅಂತ್ಯಕ್ರಿಯೆ ನೆರವೇರಿಸಲು ತನ್ನ ತಂದೆಯ ಮೃತದೇಹದ ಅರ್ಧ ಭಾಗಕ್ಕೆ ಬೇಡಿಕೆ ಇಟ್ಟಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಟಿಕಮ್ ಗಢದಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ ಎಂದು ಸೋಮವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿಮೀ ದೂರವಿರುವ ಲಿಧೋರತಾಲ್ ಗ್ರಾಮದಲ್ಲಿ ರವಿವಾರ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು ಎಂದು ಅವರು ಹೇಳಿದ್ದಾರೆ.
ಸಹೋದರ ನಡುವಿನ ವ್ಯಾಜ್ಯದ ಬೆನ್ನಿಗೇ, ಗ್ರಾಮಸ್ಥರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಜತಾರಾ ಪೊಲೀಸ್ ಠಾಣೆಯ ಉಸ್ತುವಾರಿ ಅರವಿಂದ್ ಸಿಂಗ್ ಡಾಂಗಿ ತಿಳಿಸಿದ್ದಾರೆ.
ತಮ್ಮ ಕಿರಿಯ ಪುತ್ರ ದೇಶ್ ರಾಜ್ ನೊಂದಿಗೆ ವಾಸಿಸುತ್ತಿದ್ದ ಧ್ಯಾನಿ ಸಿಂಗ್ ಘೋಷ್ (84) ಎಂಬವರು ಅನಾರೋಗ್ಯದಿಂದ ರವಿವಾರ ನಿಧನರಾದರು. ಈ ಕುರಿತು ಗ್ರಾಮದಿಂದ ಹೊರಗೆ ವಾಸಿಸುತ್ತಿರುವ ಹಿರಿಯ ಪುತ್ರ ಕಿಶನ್ ಗೆ ಮಾಹಿತಿ ನೀಡಲಾಗಿದ್ದು, ಆತ ಸ್ಥಳಕ್ಕೆ ಧಾವಿಸಿದ್ದಾನೆ ಎಂದು ಅವರು ಹೇಳಿದ್ದಾರೆ.
ನಾನು ನನ್ನ ತಂದೆಯ ಅಂತ್ಯಕ್ರಿಯೆ ನೆರವೇರಿಸುತ್ತೇನೆ ಎಂದು ಗ್ರಾಮಕ್ಕೆ ಬಂದ ಹಿರಿಯ ಪುತ್ರ ಕಿಶನ್ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಿಸಿದ್ದಾನೆ. ಆದರೆ, ತನ್ನ ತಂದೆಯ ಅಂತ್ಯಕ್ರಿಯೆಯನ್ನು ತಾನೇ ಮಾಡಬೇಕು ಎಂಬುದು ಅವರ ಅಂತಿಮ ಬಯಕೆಯಾಗಿತ್ತು ಎಂದು ಕಿರಿಯ ಪುತ್ರ ದೇಶ್ ರಾಜ್ ವಾದಿಸಿದ್ದಾನೆ. ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದೆ.
ಮದ್ಯದ ಅಮಲಿನಲ್ಲಿದ್ದ ಕಿಶನ್, ತನ್ನ ತಂದೆಯ ಮೃತದೇಹವನ್ನು ಎರಡು ಭಾಗಗಳಾಗಿ ತುಂಡರಿಸಿ, ಅವನ್ನು ತಮ್ಮಿಬ್ಬರ ನಡುವೆ ಹಂಚಬೇಕು ಎಂದು ಪಟ್ಟು ಹಿಡಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಕಿಶನ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಆತ ಸ್ಥಳದಿಂದ ನಿರ್ಗಮಿಸಿದ್ದಾನೆ. ನಂತರ ಕಿರಿಯ ಪುತ್ರ ದೇಶ್ ರಾಜ್ ತನ್ನ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾನೆ ಎಂದು ಹೇಳಲಾಗಿದೆ.