ಪಾಕ್‌ಗೆ ಹೊಂದಿಕೊಂಡ 4 ರಾಜ್ಯಗಳಲ್ಲಿ ನಾಳೆಯಿಂದ ಮತ್ತೆ ಅಣಕು ಕಾರ್ಯಾಚರಣೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿರುವ ನಾಲ್ಕು ರಾಜ್ಯಗಳಾದ ಗುಜರಾತ್, ರಾಜಸ್ಥಾನ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆಯು ಗುರುವಾರದಿಂದ ಮತ್ತೆ ಆರಂಭಗೊಳ್ಳಲಿದೆ.
ಅದೇ ವೇಳೆ, ಹರ್ಯಾಣ ಸರಕಾರವೂ ಮೇ 29ರಂದು ‘ಆಪರೇಶನ್ ಶೀಲ್ಡ್’ ಎಂಬ ಹೆಸರಿನಲ್ಲಿ ರಾಜ್ಯವ್ಯಾಪಿ ಅಣಕು ಕಾರ್ಯಾಚರಣೆ ನಡೆಸಲಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ರಾಜ್ಯದ ಸಿದ್ಧತೆ ಮತ್ತು ಸ್ಪಂದನೆ ಸಾಮರ್ಥ್ಯವನ್ನು ಬಲಪಡಿಸುವುದಕ್ಕಾಗಿ ಗುರುವಾರ 5 ಗಂಟೆಯ ಬಳಿಕ ರಾಜ್ಯದ ಎಲ್ಲಾ 22 ಜಿಲ್ಲೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಯಲಿದೆ.
ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ನಡೆಸಿದ ಭಯೋತ್ಪಾದಕ ದಾಳಿಯ ಬಳಿಕ, ಆ ದೇಶದಲ್ಲಿರುವ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಸಂದರ್ಭದಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ ನಡೆದಿತ್ತು. ಅಂದು 244 ಜಿಲ್ಲೆಗಳಲ್ಲಿ ನಡೆದ ಅಣಕು ಕಾರ್ಯಾಚರಣೆ ವೇಳೆ, ಬೆಳಕು ಆರಿಸುವುದು, ವಾಯು ದಾಳಿಯನ್ನು ಸೂಚಿಸುವ ಸೈರನ್‌ಗಳನ್ನು ಮೊಳಗಿಸುವುದು, ಜನರನ್ನು ಸ್ಥಳಾಂತರಿಸುವ ನಿಯಮಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಹುಟ್ಟಿಸುವುದು ಮುಂತಾದ ವಿಷಯಗಳಲ್ಲಿ ಮಾಹಿತಿ ನೀಡಲಾಗಿತ್ತು.