ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿಯ ಪತ್ರ ಕುರಿತ ‘ಲವ್ ಜಿಹಾದ್’ ಕಾರ್ಯಕ್ರಮಗಳನ್ನು ತೆಗೆಯುವಂತೆ ABP News ಸಹಿತ ಐದು ಚಾನೆಲ್‌ಗಳಿಗೆ ಎನ್‌ಬಿಡಿಎಸ್‌ಎ ಆದೇಶ
Photo Credit : scroll.in
ಹೊಸದಿಲ್ಲಿ: ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು (ಎನ್‌ಬಿಡಿಎಸ್‌ಎ) ಎನ್‌ಸಿಇಆರ್‌ಟಿ ಪುಸ್ತಕವನ್ನು ‘ಲವ್ ಜಿಹಾದ್’ಪಿತೂರಿಯೊಂದಿಗೆ ತಳುಕು ಹಾಕಿದ್ದ ಎಂಟು ಕಾರ್ಯಕ್ರಮಗಳನ್ನು ತೆಗೆದುಹಾಕುವಂತೆ ಐದು ಸುದ್ದಿವಾಹಿನಿಗಳಿಗೆ ಆದೇಶಿಸಿದೆ ಎಂದು scroll.in ವರದಿ ಮಾಡಿದೆ.
ಹಳೆಯ ಎನ್‌ಸಿಇಆರ್‌ಟಿ ಮೂರನೇ ತರಗತಿಯ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲಿಯ ‘ಚಿಟ್ಟಿ ಆಯೀ ಹೈ’ ಶೀರ್ಷಿಕೆಯ ಅಧ್ಯಾಯದಲ್ಲಿನ ಕಾಲ್ಪನಿಕ ಪತ್ರವೊಂದನ್ನು ತಪ್ಪಾಗಿ ಪ್ರತಿನಿಧಿಸಲಾಗಿದೆ ಎಂದು ಆರೋಪಿಸಿ ಇಂದ್ರಜಿತ್ ಘೋರ್ಪಡೆ ಮತ್ತು ಉತ್ಕರ್ಷ ಮಿಶ್ರಾ ಎನ್ನುವವರು ಎನ್‌ಬಿಡಿಎಸ್‌ಎಗೆ ದೂರು ಸಲ್ಲಿಸಿದ್ದರು. ರೀನಾ ಎಂಬ ಬಾಲಕಿ ಅಹ್ಮದ್ ಎಂಬ ಬಾಲಕನಿಗೆ ಬರೆದಿದ್ದ ಪತ್ರವನ್ನು ಲವ್ ಜಿಹಾದ್ ಪಿತೂರಿಯ ಪುರಾವೆಯಾಗಿ ಟಿವಿ ಚಾನೆಲ್‌ಗಳು ತಪ್ಪಾಗಿ ಬಿಂಬಿಸಿವೆ ಎಂದು ದೂರಿನಲ್ಲಿ ಬೆಟ್ಟು ಮಾಡಲಾಗಿತ್ತು.
ಈ ಪತ್ರವನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಿದ್ದ ಕಾರ್ಯಕ್ರಮಗಳನ್ನು ಇಂಡಿಯಾ ಟಿವಿ,ನ್ಯೂಸ್ 18 ಮಧ್ಯಪ್ರದೇಶ/ಛತ್ತೀಸ್‌ಗಡ,ಝೀ ಮಧ್ಯಪ್ರದೇಶ/ಛತ್ತೀಸ್‌ಗಡ,ಝೀ ನ್ಯೂಸ್ ಮತ್ತು ಎಬಿಪಿ ನ್ಯೂಸ್ ಚಾನೆಲ್‌ಗಳು ಪ್ರಸಾರ ಮಾಡಿದ್ದವು.
ವೀಡಿಯೊಗಳನ್ನು ತೆಗೆದುಹಾಕುವಂತೆ ತನ್ನ ಡಿ.2ರ ಆದೇಶದಲ್ಲಿ ಸೂಚಿಸಿರುವ ಎನ್‌ಬಿಡಿಎಸ್‌ಎ, ಎನ್‌ಸಿಇಆರ್‌ಟಿ ಅಧ್ಯಾಯದಲ್ಲಿ ಬಾಲಕಿಯು ಬೇರೆ ಧರ್ಮದ ಬಾಲಕನಿಗೆ ಪತ್ರ ಬರೆದಿದ್ದಾಳೆ ಎಂಬ ಮಾತ್ರಕ್ಕೆ ಅದನ್ನು ʼಲವ್ ಜಿಹಾದ್ʼ ಎಂದು ಬಣ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಭಾರತವು ಜಾತ್ಯತೀತ ದೇಶವಾಗಿದೆ ಮತ್ತು ಅದು ಸಂವಿಧಾನದ ಆದೇಶವೂ ಆಗಿದೆ ಎಂದು ಆದೇಶದಲ್ಲಿ ಹೇಳಿರುವ ಎನ್‌ಬಿಡಿಎಸ್‌ಎ ಅಧ್ಯಕ್ಷ ನಿವೃತ್ತ ನ್ಯಾಯಾಧೀಶ ಎ.ಕೆ.ಸಿಕ್ರಿಯವರು, ಆದ್ದರಿಂದ ಟಿವಿ ಚಾನೆಲ್‌ಗಳು ಎನ್‌ಸಿಇಆರ್‌ಟಿ ಪುಸ್ತಕದಲ್ಲಿಯ ನಿರ್ದಿಷ್ಟ ಅಧ್ಯಾಯವನ್ನು ತಿರುಚಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ.
ಲವ್ ಜಿಹಾದ್‌ಗೆ ಸಂಬಂಧಿಸಿದ ವರದಿಗಳಿಗಾಗಿ ಚಾನೆಲ್‌ಗಳನ್ನು ಇತ್ತೀಚಿಗೆ ಖಂಡಿಸಲಾಗಿದ್ದರೂ ಅವು ಸಂಪೂರ್ಣವಾಗಿ ವ್ಯಕ್ತಿನಿಷ್ಠ, ಅತ್ಯಂತ ಧ್ರುವೀಕರಣದ ಮತ್ತು ಪ್ರಚಾರವನ್ನು ಬಯಸುವ ಕೆಲವು ಗುಂಪುಗಳಿಂದ ಒತ್ತಾಯಿಸಲ್ಪಟ್ಟ ಸುದ್ದಿ ಕಥನವನ್ನು ಹೈಲೈಟ್ ಮಾಡಿವೆ ಎಂದು ದೂರುದಾರರು ಆರೋಪಿಸಿದ್ದರು.
ವಾಹಿನಿಗಳು ಸುದ್ದಿ ಕಥನವನ್ನು ನಿರ್ವಹಿಸಿದ ರೀತಿಗೆ ಎನ್‌ಬಿಡಿಎಸ್‌ಎ ಅಸಮಾಧಾನ ವ್ಯಕ್ತಪಡಿಸಿದೆ.
ಅಧ್ಯಾಯದಲ್ಲಿಯ ಪತ್ರದ ಬಗ್ಗೆ ಪೋಷಕರೋರ್ವರು ದೂರಿಕೊಂಡಿದ್ದರು ಮತ್ತು ತಾವು ದೂರಿನ ಬಗ್ಗೆ ವರದಿ ಮಾಡಿದ್ದೆವು ಎಂದು ಚಾನೆಲ್‌ಗಳು ಸಮರ್ಥಿಸಿಕೊಂಡಿದ್ದನ್ನು ಬೆಟ್ಟು ಮಾಡಿರುವ ಸಿಕ್ರಿ, ಸುದ್ದಿಯು ದೂರಿನ ವರದಿಗಾರಿಕೆಗಷ್ಟೇ ಸೀಮಿತವಾಗಿದ್ದರೆ ಬಹುಶಃ ಆಕ್ಷೇಪಣೆಗಳು ವ್ಯಕ್ತವಾಗುತ್ತಿರಲಿಲ್ಲ. ಬದಲಿಗೆ ಈ ದೂರನ್ನು ಚಾನೆಲ್‌ಗಳು ನಿರ್ದಿಷ್ಟ ನಿರೂಪಣೆಯೊಂದಿಗೆ ಚರ್ಚೆಯ ವಿಷಯವನ್ನಾಗಿ ಮಾಡಿದ್ದವು ಮತ್ತು ಹಾಗೆ ಮಾಡುವಾಗ ಇತರ ಯಾವುದೇ ಪೋಷಕರನ್ನು ಅವು ಸಂದರ್ಶಿಸಿರಲಿಲ್ಲ ಎಂದು ತನ್ನ ಆದೇಶದಲ್ಲಿ ಹೇಳಿದ್ದಾರೆ.
ಕಾರ್ಯಕ್ರಮಗಳನ್ನು ರೂಪಿಸಿದ್ದ ರೀತಿಯು ವಸ್ತುನಿಷ್ಠತೆಯ ಕೊರತೆಯನ್ನು ಸ್ಪಷ್ಟವಾಗಿ ತೋರಿಸಿದೆ ಎಂದೂ ಅವರು ಹೇಳಿದ್ದಾರೆ.
ತಮ್ಮ ವೆಬ್‌ಸೈಟ್‌ಗಳು, ಯೂಟ್ಯೂಬ್ ಚಾನೆಲ್‌ಗಳು ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ಗಳಿಂದ ಆಕ್ಷೇಪಿತ ವೀಡಿಯೊಗಳನ್ನು ತೆಗೆದುಹಾಕುವಂತೆ ಈ ಐದು ಚಾನೆಲ್‌ಗಳಿಗೆ ಆದೇಶಿಸಿರುವ ಎನ್‌ಬಿಡಿಎಸ್‌ಎ, ಒಂದು ವಾರದೊಳಗೆ ಪಾಲನಾ ವರದಿಯನ್ನು ಸಲ್ಲಿಸುವಂತೆ ತಾಕೀತು ಮಾಡಿದೆ.