ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಆರೋಪ: ಮಹಿಳೆಗೆ 22 ಲಕ್ಷ ರೂ. ವಂಚನೆ
ಸಾಂದರ್ಭಿಕ ಚಿತ್ರ | PC : PTI
ಮುಂಬೈ: ದಿಲ್ಲಿ ಭಯೋತಾದನೆ ನಿಗ್ರಹ ದಳ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಂದು ಹೇಳಿಕೊಂಡ ಸೈಬರ್ ವಂಚಕರು, ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದೀರಿ ಎಂದು ಆರೋಪಿಸಿ ಮುಂಬೈಯ ಹಿರಿಯ ಮಹಿಳೆಯೊಬ್ಬರಿಗೆ 22 ಲಕ್ಷ ರೂ. ವಂಚಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ದಕ್ಷಿಣ ಮುಂಬೈಯ ಗಿರ್‌ಗಾಂವ್ ವಾಸಿಯಾಗಿರುವ 64 ವರ್ಷದ ಮಹಿಳೆಗೆ ಈ ತಿಂಗಳ ಆರಂಭದಲ್ಲಿ ಫೋನ್ ಕರೆಗಳನ್ನು ಮಾಡಿರುವ ವಂಚಕರು, ನೀವು ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ನೀಡಿದ್ದೀರಿ ಎಂದು ಆರೋಪಿಸಿದರು. ಇದಕ್ಕಾಗಿ ನಿಮಗೆ 10 ವರ್ಷ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದರು.
ಇದರಿಂದ ಹೆದರಿದ ಮಹಿಳೆ, ವಂಚಕರು ಸೂಚಿಸಿದಂತೆ 22.4 ಲಕ್ಷ ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿದರು. ಬಳಿಕ, ಅವರಿಗೆ ಕರೆಗಳು ಬರುವುದು ನಿಂತಿತು. ತಾನು ವಂಚನೆಗೆ ಒಳಗಾಗಿರುವುದೂ ಅವರ ಅರಿವಿಗೆ ಬಳಿಕ ಬಂತು. ಅವರು ಜೂನ್ 13ರಂದು ದಕ್ಷಿಣ ವಲಯ ಸೈಬರ್ ಪೊಲೀಸರಿಗೆ ದೂರು ನೀಡಿದರು.