ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಸಹಿಸುವುದಿಲ್ಲವೆಂದು ವಿಶ್ವಕ್ಕೆ ತಿಳಿಸಿದ್ದೇವೆ: ಯುರೋಪ್ ಪ್ರವಾಸದ ಬಳಿಕ ಸರ್ವಪಕ್ಷ ನಿಯೋಗ
Image Source : PTI
ಹೊಸದಿಲ್ಲಿ: ‘ಆಪರೇಷನ್ ಸಿಂಧೂರ’ ಹಿನ್ನೆಲೆಯಲ್ಲಿ ಆರು ಐರೋಪ್ಯ ದೇಶಗಳಿಗೆ ಉನ್ನತ ಮಟ್ಟದ ರಾಜತಾಂತ್ರಿಕ ಭೇಟಿಯ ಬಳಿಕ ಸ್ವದೇಶಕ್ಕೆ ಮರಳಿರುವ ಸರ್ವಪಕ್ಷ ನಿಯೋಗವು,ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ಅದನ್ನು ‘ಯುದ್ಧ ಕೃತ್ಯ’ ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ.
ಹಿರಿಯ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ ನೇತೃತ್ವದ ಸರ್ವಪಕ್ಷ ನಿಯೋಗವು ಫ್ರಾನ್ಸ್, ಇಟಲಿ, ಡೆನ್ಮಾರ್ಕ್, ಬ್ರಿಟನ್, ಬೆಲ್ಜಿಯಂ ಮತ್ತು ಜರ್ಮನಿಗೆ ಭೇಟಿ ನೀಡಿತ್ತು.
ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವುದು, ಭಾರತವನ್ನು ಕಾಡುತ್ತಿರುವ ಭಯೋತ್ಪಾದನೆ ಪಿಡುಗಿನ ಬಗ್ಗೆ ಅಂತರರಾಷ್ಟ್ರೀಯ ಜಾಗ್ರತಿಯನ್ನು ಮೂಡಿಸುವುದು ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ಏಕತೆಯನ್ನು ಪ್ರಸ್ತುತಪಡಿಸುವುದು ನಿಯೋಗದ ಭೇಟಿಯ ಉದ್ದೇಶವಾಗಿತ್ತು.
ಸ್ವದೇಶಕ್ಕೆ ಮರಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಂಕರ್ ಪ್ರಸಾದ್ ಅವರು, ‘ನಾವು ಭೇಟಿ ನೀಡಿದ ಪ್ರತಿಯೊಂದು ದೇಶದಲ್ಲಿಯೂ ಅಲ್ಲಿಯ ಸಂಸದರು, ಸಚಿವರು,ಚಿಂತನ ಚಾವಡಿಗಳು,ಮಾಧ್ಯಮಗಳು ಮತ್ತು ಭಾರತೀಯ ಸಮುದಾಯಗಳೊಂದಿಗೆ ಚರ್ಚಿಸಿದ್ದೇವೆ. ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ವ್ಯಾಪಕ ಆಕ್ರೋಶ ನಿಜಕ್ಕೂ ಎದ್ದು ಕಂಡ ವಿಷಯವಾಗಿತ್ತು. ಎಲ್ಲ ದೇಶಗಳು ಅದನ್ನು ಬಲವಾಗಿ ಖಂಡಿಸಿದವು ಮತ್ತು ಭಾರತದೊಂದಿಗೆ ಏಕತೆಯನ್ನು ವ್ಯಕ್ತಪಡಿಸಿದವು’ ಎಂದು ತಿಳಿಸಿದರು.
‘ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಸಹಿಸಲಾಗುವುದಿಲ್ಲ ಎನ್ನುವುದನ್ನು ನಾವು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದೇವೆ. ಇಂತಹ ಯಾವುದೇ ಕೃತ್ಯವನ್ನು ಯುದ್ಧ ಕೃತ್ಯ ಎಂದು ಪರಿಗಣಿಸಲಾಗುವುದು. ಈ ಸಂದೇಶವನ್ನು ಯುರೋಪಿನಾದ್ಯಂತ ನಮ್ಮ ಸಹವರ್ತಿಗಳಿಗೆ ದೃಢವಾಗಿ ತಿಳಿಸಿದ್ದೇವೆ ಮತ್ತು ಅಂತರರಾಷ್ಟ್ರೀಯ ಸಮುದಾಯವು ಅದನ್ನು ಗಂಭೀರವಾಗಿ ಪರಿಗಣಿಸಿದೆ’ಎಂದು ಬಿಜೆಪಿ ಸಂಸದ ಗುಲಾಮ್ ಅಲಿ ಖಟಾನಾ ತಿಳಿಸಿದರು.
ನಿಯೋಗದ ಭೇಟಿಯು ಭಾರತವು ದೀರ್ಘಕಾಲದಿಂದ ಎದುರಿಸುತ್ತಿರುವ ಬೆದರಿಕೆಗಳನ್ನು ಬಹಿರಂಗಗೊಳಿಸುವುದನ್ನು ಕೇಂದ್ರೀಕರಿಸಿತ್ತು ಎಂದು ಬಿಜೆಪಿ ಸಂಸದೆ ದಗ್ಗುಬಾಟಿ ಪುರಂದರೇಶ್ವರಿ ಹೇಳಿದರೆ,‘ನಾವು ಪಾಕಿಸ್ತಾನದ ವಿಶ್ವಾಸಘಾತುಕ ಚಟುವಟಿಕೆಗಳನ್ನು ಜಗತ್ತಿಗೆ ಬಹಿರಂಗಗೊಳಿಸಿದ್ದೇವೆ ಮತ್ತು ನಾವು ಭೇಟಿಯಾಗಿದ್ದ ಪ್ರತಿಯೊಬ್ಬರಿಗೂ ಇದು ಮನವರಿಕೆಯಾಗಿದೆ’ ಎಂದು ಎಐಎಡಿಎಂಕೆ ಸಂಸದ ಎಂ.ತಂಬಿದುರೈ ತಿಳಿಸಿದರು.