×
Ad

ಸಿಂಧೂ ಜಲ ಒಪ್ಪಂದ ಪುನಃಸ್ಥಾಪನೆ ಪಾಕಿಸ್ತಾನ ಮರುಮನವಿ

Update: 2025-06-07 09:02 IST

PC : PTI 

ಇಸ್ಲಾಮಾಬಾದ್: ಪೆಹಲ್ಗಾಮ್ ಘಟನೆಗೆ ಪ್ರತಿಯಾಗಿ ಪಾಕಿಸ್ತಾನ ಜತೆಗಿನ ಸಿಂಧೂ ಜಲ ಒಪ್ಪಂದವನ್ನು ರದ್ದುಪಡಿಸಿದ ಭಾರತದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪಾಕಿಸ್ತಾನದ ಅಧಿಕಾರಿಗಳು ಭಾರತಕ್ಕೆ ಕಳೆದ ಏಪ್ರಿಲ್‍ನಿಂದ ಹಲವು ಬಾರಿ ಪತ್ರ ಬರೆದಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸುವುವವರೆಗೂ ಆರು ದಶಕಗಳಷ್ಟು ಹಳೆಯ ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟಿದೆ. 26 ಮಂದಿಯನ್ನು ಬಲಿ ಪಡೆದ ಏಪ್ರಿಲ್ 22ರ ಪೆಹಲ್ಗಾಮ್ ದಾಳಿಯ ಮರುದಿನವೇ ದಂಡನಾ ಕ್ರಮವಾಗಿ ಭಾರತ ಈ ನಿರ್ಧಾರ ಪ್ರಕಟಿಸಿತ್ತು.

ಪಾಕಿಸ್ತಾನದ ಜಲ ಸಂಪನ್ಮೂಲ ಕಾರ್ಯದರ್ಶಿ ಸೈಯ್ಯದ್ ಅಲಿ ಮುರ್ತಾಝಾ ಆ ಬಳಿಕ ಭಾರತದ ಜಲಶಕ್ತಿ ಸಚಿವಾಲಯಕ್ಕೆ ಇದುವರೆಗೆ ನಾಲ್ಕು ಪತ್ರಗಳನ್ನು ಬರೆದು, ಒಪ್ಪಂದ ರದ್ದುಪಡಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿದ್ದಾರೆ. ಆದರೆ ಯಾವಾಗ ಈ ಪತ್ರಗಳನ್ನು ಬರೆದಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಮೂರು ಪತ್ರಗಳು ಬಂದಿವೆ ಎಂದು ಉನ್ನತ ಮೂಲಗಳು ಹೇಳಿವೆ.

ಭಾರತ ಈ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಪಡಿಸುವಂತಿಲ್ಲ; ಏಕೆಂದರೆ ಈ ರದ್ದುಪಡಿಸುವಿಕೆಯಿಂದ ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸಿದಂತಾಗುತ್ತದೆ ಎನ್ನುವುದು ಪಾಕಿಸ್ತಾನದ ವಾದ. ಭಾರತದ ಜಲ ಸಂಪನ್ಮೂಲ ಕಾರ್ಯದರ್ಶಿ ದೇಬಶ್ರೀ ಮುಖರ್ಜಿಯರು ಪಾಕಿಸ್ತಾನದ ಜಲ ಸಂಪನ್ಮೂಲ ಕಾರ್ಯದರ್ಶಿಗೆ ಅಧಿಕೃತ ಅಧಿಸೂಚನೆಯನ್ನು ಏಪ್ರಿಲ್24ರಂದು ನೀಡಿ ಒಪ್ಪಂದ ಅಮಾನತುಪಡಿಸುವುದಾಗಿ ಮಾಹಿತಿ ನೀಡಿದ್ದರು.

"ಸದಾಚಾರದ ಕ್ರಮವಾಗಿ ಒಪ್ಪಂದವನ್ನು ಗೌರವಿಸುವ ಹೊಣೆಗಾರಿಕೆ ಒಪ್ಪಂದದ ಮೂಲ ಅಂಶ. ಆದಾಗ್ಯೂ ನಿರಂತರವಾಗಿ ಪಾಕಿಸ್ತಾನ ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವನ್ನು ಗುರಿಮಾಡಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಾ ಬಂದಿರುವುದನ್ನು ನಾವು ನೋಡಿದ್ದೇವೆ. ಇದಕ್ಕೆ ದಂಡನಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಮುಖರ್ಜಿ ಪತ್ರದಲ್ಲಿ ವಿವರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News