×
Ad

ಪ್ರತಿಯೋರ್ವ ದೇಶಭಕ್ತ ಭಾರತೀಯನೂ ಚೀನಾ ಬಗ್ಗೆ ಉತ್ತರಗಳನ್ನು ಕೋರುತ್ತಿದ್ದಾನೆ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆ ಬೆನ್ನಲ್ಲೇ ಕಾಂಗ್ರೆಸ್ ಪ್ರತಿಕ್ರಿಯೆ

Update: 2025-08-04 18:36 IST

ರಾಹುಲ್ ಗಾಂಧಿ | PC : PTI 

ಹೊಸದಿಲ್ಲಿ: 2020ರ ಗಾಲ್ವಾನ್ ಘಟನೆಯ ನಂತರ ಪ್ರತಿಯೊಬ್ಬ ದೇಶಭಕ್ತ ಭಾರತೀಯರು ಚೀನಾದ ಬಗ್ಗೆ ಉತ್ತರಗಳನ್ನು ಕೋರುತ್ತಿದ್ದಾನೆ. ಆದರೆ ಮೋದಿ ಸರಕಾರ ʼ "ನಿರಾಕರಿಸು, ಗಮನವನ್ನು ಬೇರೆಡೆ ಸೆಳೆಯು, ಸುಳ್ಳು ಹೇಳು ಮತ್ತು ಸಮರ್ಥಿಸಿಕೊಳ್ಳು" ಎಂಬ ನೀತಿಯೊಂದಿಗೆ ಸತ್ಯವನ್ನು ಮರೆಮಾಡಲು ಪ್ರಯತ್ನಿಸಿದೆ ಎಂದು ಕಾಂಗ್ರೆಸ್ ಹೇಳಿದೆ.

1962ರ ನಂತರ ಭಾರತ ಎದುರಿಸಿದ ಅತಿದೊಡ್ಡ ಪ್ರಾದೇಶಿಕ ಹಿನ್ನೆಡೆಗೆ ಮೋದಿ ಸರಕಾರವೇ ಕಾರಣ ಎಂದು ವಿರೋಧ ಪಕ್ಷ ಆರೋಪಿಸಿದೆ. ಸಹಕಾರ ತೋರಿಸದ ಚೀನಾದ ಜೊತೆ ಬಾಂದವ್ಯಕ್ಕೆ ಸರಕಾರ ಯತ್ನಿಸುತ್ತಿದ್ದು, ಇದು ಧೈರ್ಯ ಹೀನತೆ ಮತ್ತು ತಪ್ಪಾದ ಆರ್ಥಿಕತೆಯ ಫಲ ಎಂದು ಹೇಳಿದೆ.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 2020ರ ಜೂನ್ 15ರಂದು ಗಾಲ್ವಾನ್‌ನಲ್ಲಿ 20 ವೀರ ಸೈನಿಕರು ಹುತಾತ್ಮರಾದಾಗಿನಿಂದ ಪ್ರತಿಯೋರ್ವ ದೇಶಭಕ್ತ ಭಾರತೀಯನು ಉತ್ತರಗಳನ್ನು ಕೋರುತ್ತಿದ್ದಾನೆ. ಆದರೆ ಉತ್ತರಗಳನ್ನು ನೀಡುವ ಬದಲು, ಕಳೆದ ಐದು ವರ್ಷಗಳಿಂದ ಮೋದಿ ಸರಕಾರ ʼನಿರಾಕರಿಸು, ಗಮನ ಬೇರೆಡೆ ಸೆಳೆಯು, ಸುಳ್ಳು ಹೇಳು ಮತ್ತು ಸಮರ್ಥಿಸುʼಎಂಬ ನೀತಿಯನ್ನು ಸತ್ಯವನ್ನು ಮರೆಮಾಡಲು ಆಯ್ಕೆ ಮಾಡಿಕೊಂಡಿದೆ" ಎಂದು ಹೇಳಿದರು.

"ನಮ್ಮ ಸೈನಿಕರು ಗಲ್ವಾನ್‌ನಲ್ಲಿ ದೇಶಕ್ಕಾಗಿ ವೀರೋಚಿತವಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕೇವಲ ನಾಲ್ಕು ದಿನಗಳ ನಂತರ 2020ರ ಜೂನ್ 19ರಂದು ಪ್ರಧಾನಿಯವರು ನಮ್ಮ ಗಡಿಯನ್ನು ಯಾರೂ ಪ್ರವೇಶಿಸಿಲ್ಲ, ಒಳಗೆ ಯಾರೂ ಇಲ್ಲ' ಎಂದು ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದು ಏಕೆ? ಇಂದು ಭಾರತೀಯ ಗಸ್ತು ಪಡೆಯು ಡೆಪ್ಸಾಂಗ್, ಡೆಮ್ಚೋಕ್ ಮತ್ತು ಚುಮಾರ್‌ಗಳಲ್ಲಿ ತಮ್ಮದೇ ಆದ ಗಸ್ತು ಕೇಂದ್ರಗಳನ್ನು ಪ್ರವೇಶಿಸಲು ಚೀನಾದ ಒಪ್ಪಿಗೆಯನ್ನು ಪಡೆಯಬೇಕಾಗಿದೆ. ಆದರೆ ಮೊದಲು ಭಾರತದ ಪ್ರಾದೇಶಿಕ ಹಕ್ಕುಗಳನ್ನು ಮುಕ್ತವಾಗಿ ಚಲಾಯಿಸುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

2020ರಲ್ಲಿ ಡೆಪ್ಸಾಂಗ್‌ನಲ್ಲಿ 900 ಚದರ ಕಿ.ಮೀ ಸೇರಿದಂತೆ ಪೂರ್ವ ಲಡಾಖ್‌ನ 1,000 ಚದರ ಕಿ.ಮೀ ಚೀನಾದ ನಿಯಂತ್ರಣಕ್ಕೆ ಬಂದಿದೆ ಎಂದು ವ್ಯಾಪಕವಾಗಿ ವರದಿಯಾಗಿಲ್ಲವೇ? ಲೇಹ್‌ನ ಎಸ್ಪಿ ವಾರ್ಷಿಕ ಪೊಲೀಸ್ ಮಹಾನಿರ್ದೇಶಕರ ಸಮ್ಮೇಳನದಲ್ಲಿ ಭಾರತವು ಪೂರ್ವ ಲಡಾಖ್‌ನಲ್ಲಿರುವ 65 ಗಸ್ತು ಕೇಂದ್ರಗಳಲ್ಲಿ 26 ಗಸ್ತು ಕೇಂದ್ರಗಳಿಗೆ ಪ್ರವೇಶವನ್ನು ಕಳೆದುಕೊಂಡಿದೆ ಎಂದು ವರದಿ ಸಲ್ಲಿಸಲಿಲ್ಲವೇ? ಎಂದು ರಮೇಶ್ ಪ್ರಶ್ನಿಸಿದರು.

ಚೀನಾದಿಂದ ಆಮದುಗಳು, ವಿಶೇಷವಾಗಿ ಎಲೆಕ್ಟ್ರಾನಿಕ್ಸ್, ವಿದ್ಯುತ್ ಬ್ಯಾಟರಿಗಳ ಆಮದುಗಳು ಹೆಚ್ಚುತ್ತಿವೆ ಮತ್ತು ಟೆಲಿಕಾಂ, ಔಷಧಗಳು ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಪ್ರಮುಖ ವಲಯಗಳು ಚೀನಾದ ಆಮದಿನ ಮೇಲೆ ತೀವ್ರವಾಗಿ ಅವಲಂಬಿತವಾಗಿವೆ ಎಂಬುದು ನಿಜವಲ್ಲವೇ? 2024-25ರಲ್ಲಿ ಚೀನಾದೊಂದಿಗಿನ ವ್ಯಾಪಾರ ಕೊರತೆಯು ದಾಖಲೆಯ 99.2 ಬಿಲಿಯನ್ ತಲುಪಿದೆ ಎಂಬುದು ನಿಜವಲ್ಲವೇ? ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗೆ ಫೈಟರ್ ಜೆಟ್‌ಗಳು, ಕ್ಷಿಪಣಿಗಳನ್ನು ಒದಗಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದ ದೇಶದೊಂದಿಗೆ ಇಂದು ಮೋದಿ ಸರಕಾರ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸುತ್ತಿದೆ ಎಂಬುದು ನಿಜವಲ್ಲವೇ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News