ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಮುಖ್ಯಸ್ಥ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್
ರಾಹುಲ್ ಮಾಂಕೂಟತ್ತಿಲ್ (Photo credit: indiatoday.in)
ತಿರುವನಂತಪುರಂ: ಮಲಯಾಳಂ ನಟಿ ಹಾಗೂ ಮಾಜಿ ಪತ್ರಕರ್ತೆ ರಿನಿ ಆ್ಯನ್ ಜಾರ್ಜ್ ಹಾಗೂ ನಂತರ ಲೇಖಕಿ ಹನಿ ಭಾಸ್ಕರನ್ ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬೆನ್ನಿಗೇ, ಕೇರಳ ಯುವ ಕಾಂಗ್ರೆಸ್ ಮುಖ್ಯಸ್ಥ ಹುದ್ದೆಗೆ ರಾಹುಲ್ ಮಾಂಕೂಟತ್ತಿಲ್ ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರಮುಖ ರಾಜಕೀಯ ಪಕ್ಷವೊಂದರ ಯುವ ನಾಯಕರೊಬ್ಬರು ನನಗೆ ಪದೇ ಪದೇ ಆಕ್ಷೇಪಾರ್ಹ ಸಂದೇಶ ರವಾನಿಸಿದ್ದಾರೆ ಹಾಗೂ ಅವರು ನನ್ನನ್ನು ಹೋಟೆಲ್ ಗೂ ಆಹ್ವಾನಿಸಿದ್ದಾರೆ ಎಂದು ಬುಧವಾರ ನಟಿ ರಿನಿ ಆರೋಪಿಸಿದ್ದರು. ಅವರ ಈ ದುರ್ವರ್ತನೆ ಬಗ್ಗೆ ತಿಳಿದಿದ್ದರೂ, ಪಕ್ಷದ ನಾಯಕರು ಆತನಿಗೆ ಬೆಂಬಲ ನೀಡುವುದನ್ನು ಮುಂದುವರಿಸಿದ್ದಾರೆ ಎಂದೂ ಅವರು ದೂರಿದ್ದರು.
ಆದರೆ, ಆಕೆ ಯಾವುದೇ ಪಕ್ಷದ ನಾಯಕನ ಹೆಸರು ಹೇಳದೇ ಇದ್ದರೂ, ರಾಹುಲ್ ಮಾಂಕೂಟತ್ತಿಲ್ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ನಡೆಸಿತ್ತು. ರಾಹುಲ್ ಮಾಂಕೂಟತ್ತಿಲ್ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ಸಿಪಿಎಂನ ಯುವ ಘಟಕ ಡಿವೈಎಫ್ಐ ಕೂಡಾ ಪಾಲಕ್ಕಾಡ್ ನಲ್ಲಿರುವ ಅವರ ಕಚೇರಿಯವರೆಗೆ ಪಾದಯಾತ್ರೆ ನಡೆಸಿತ್ತು.
ಇದರ ಬೆನ್ನಿಗೇ, ಲೇಖಕಿ ಹನಿ ಭಾಸ್ಕರನ್ ಕೂಡಾ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಇಂತಹುದೇ ಆರೋಪಗಳನ್ನು ಮಾಡಿದ್ದರು.
ಹೀಗಾಗಿ, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ರಾಹುಲ್, “ನಾನು ರಾಜೀನಾಮೆ ಸಲ್ಲಿಸಿರುವುದು ಯಾವುದೇ ತಪ್ಪು ಮಾಡಿದ್ದೇನೆ ಎಂದಲ್ಲ. ಬದಲಿಗೆ, ಪಕ್ಷವು ತನ್ನ ಕೆಲಸದ ಕಡೆಗೆ ಗಮನ ಕೇಂದ್ರೀಕರಿಸಲಿ ಎಂದು” ಎಂದು ಸ್ಪಷ್ಟನೆ ನೀಡಿದ್ದಾರೆ.