ಬ್ಯಾಂಕ್ ಖಾತೆಯಲ್ಲಿ ‘ಝೀರೋ ಬ್ಯಾಲೆನ್ಸ್’ ಇರುವ ಶಾಂತಿ ಲೋಕಸಭಾ ಅಭ್ಯರ್ಥಿ

Update: 2024-05-07 16:34 GMT

ಶಾಂತಿ ಬಾಯಿ ಮಾರಾವಿ | PC: newindianexpress.com

ರಾಯಪುರ : ಚತ್ತೀಸ್ ಗಡದ ಕೋರ್ಬಾ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಭೇಡ್ರಾಪಾನಿ ಗ್ರಾಮದ ನಿವಾಸಿ ಶಾಂತಿ ಬಾಯಿ ಮಾರಾವಿಯ ಖಾತೆಯಲ್ಲಿ ಒಂದು ಪೈಸೆ ಇಲ್ಲದೆ ‘ಝಿರೋ ಬ್ಯಾಲೆನ್ಸ್ ’ಮೂಲಕ ದೇಶದ ಗಮನವನ್ನು ಸೆಳೆದಿದ್ದಾರೆ.

ಅತ್ಯಂತ ಶ್ರೀಮಂತನಿಂದ ಹಿಡಿದು ಅತಿ ಕಡಿಮೆ ಆಸ್ತಿ ಇರುವ ಯಾವುದೇ ಅರ್ಹ ಭಾರತೀಯ ನಾಗರಿಕ ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶವಿರುವ ‘ಭಾರತದ ಪ್ರಜಾಪ್ರಭುತ್ವದ ಸೌಂದರ್ಯ’ಕ್ಕೆ ಶಾಂತಿ ಬಾಯಿ ಮಾರಾವಿ ಉದ್ವಲ ನಿದರ್ಶನವಾಗಿದ್ದಾಳೆಂದು ಮಾಧ್ಯಮಗಳು ಬಣ್ಣಿಸಿವೆ.

ಬೈಗಾ ಸಮುದಾಯಕ್ಕೆ ಸೇರಿದ ಶಾಂತಿ ಯಾವುದೇ ಪಕ್ಷಗಳು ತನ್ನ ಸಮುದಾಯದ ಅಹವಾಲನ್ನು ಕೇಳುತ್ತಿಲ್ಲವೆಂಬ ನೋವಿನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದರು. ಪತಿ ರಾಮಕುಮಾರ್ ಕೂಡಾ ಆಕೆಯನ್ನು ಚುನಾವಣಾ ಕಣಕ್ಕಿಳಿಯಲು ಪ್ರೋತ್ಸಾಹಿಸಿದರು. ತಮ್ಮ ಸಮುದಾಯದ ಸಮಸ್ಯೆಗಳಾಗಲಿ ಅಥವಾ ಪ್ರದೇಶದ ಅಭಿವೃದ್ಧಿಯಾಗಲಿ ಈವರೆಗೆ ಆಗದೇ ಇರುವುದಕ್ಕ್ಕೆ ತಾವು ಅಸಮಾಧಾನಗೊಂಡಿರುವುದಾಗಿ ರಾಮ್ಕುಮಾರ್-ಶಾಂತಿ ಬಾಯಿ ದಂಪತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೃಷಿ ಕಾರ್ಮಿಕರಾಗಿ ನಮ್ಮ ಸಂಪಾದನೆಯಲ್ಲಿ ಉಳಿತಾಯ ಮಾಡಿದ ಹಣದ ಜೊತೆಗೆ ನಮ್ಮ ಸಮುದಾಯದ ಕೆಲವು ಸದಸ್ಯರು ಕೂಡಾ ಆರ್ಥಿಕ ನೆರವನ್ನು ನೀಡಿದರು. ಹೀಗೆ ಚುನಾವಣೆಗೆ ಸ್ಪರ್ಧಿಸಲು ಬೇಕಾದ 12500 ರೂ.ಗಳ ಠೇವಣಿ ಹಣವನ್ನು ಸಂಗ್ರಹಿಸಿದೆವು ಎಂದು ಶಾಂತಿ ಬಾಯಿ ಅವರ ಪತಿ ಹೇಳಿದ್ದಾರೆ.

ನನ್ನ ಸಮುದಾಯದ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನನ್ನ ಗ್ರಾಮದ ನಿವಾಸಿಗಳ ಜೊತೆಗೆ ಗೌರೆಲ್ಲಾ ಮೆಂಡ್ರಾ ಮಾರ್ವಾಹಿ ಜಿಲ್ಲೆಯಲ್ಲಿ ಬೈಗಾ ಬುಡಕಟ್ಟು ಜನರ 10-12 ಹಳ್ಳಿಗಳಿದ್ದು, ಅವರೆಲ್ಲರೂ ನನ್ನನ್ನು ಬೆಂಬಲಿಸುವ ವಾಗ್ದಾನ ನೀಡಿದ್ದಾರೆ. ಬಿಜೆಪಿಯ ಸರೋಜ್ ಪಾಂಡೆ ಹಾಗೂ ಕಾಂಗ್ರೆಸ್ ನ ಜ್ಯೋತ್ಸ್ನಾ ಮಹಂತ ಅವರಂತಹ ರಾಜಕೀಯ ಘಟಾನುಘಟಿಗಳ ಜೊತೆ ನಾನು ಹೋರಾಡಲಿದ್ದೇನೆ ಎಂದು ಶಾಂತಿಬಾಯಿ ಹೇಳುತ್ತಾರೆ.

ಗೃಹಿಣಿ ಹಾಗೂ ಒಂದು ಮಗುವಿನ ತಾಯಿಯಾದ ಶಾಂತಾ ಅವರು ಕೃಷಿ ಕೆಲಸಗಳಲ್ಲಿ ತನ್ನ ಪತಿಗೆ ನೆರವಾಗುತ್ತಿದ್ದಾರೆ ಹಾಗೂ ಕೃಷಿ ಕಾರ್ಮಿಕರಾಗಿಯೂ ದುಡಿಯುತ್ತಿದ್ದಾರೆ.

ಜಿಲ್ಲಾ ಮುಖ್ಯ ಕೇಂದ್ರದಿಂದ 30 ಕಿ.ಮೀ. ದೂರದ ದುರ್ಗಮ ಪ್ರದೇಶದಲ್ಲಿ ಶಾಂತಿ ಬಾಯಿ ಅವರ ಹಳ್ಳಿ ಇದ್ದು, ಬಸ್ ಮತ್ತಿತರ ಸಾರಿಗೆ ಸಂಪರ್ಕದಿಂದ ವಂಚಿತವಾಗಿದೆ. ಆಕೆಯ ಮನೆಗೆ ಸಾಗುವ ಮಾರ್ಗವು ಹಾಳಾಗಿ ಹೋಗಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ.

ಬೈಗಾ ಸಮುದಾಯವು ಹಲವಾರು ದಶಕಗಳಿಂದ ಬದುಕುತ್ತಿರುವ ತನ್ನ ಪ್ರದೇಶದ ರೂಪವನ್ನು ಬದಲಾಯಿಸುವುದೇ ತನ್ನ ತಕ್ಷಣದ ಗುರಿಯಾಗಿ ಎಂದು ಶಾಂತಿ ಹೇಳುತ್ತಾರೆ. ಆದಾಗ್ಯೂ ಶಾಂತಿ ಅವರಿಗೆ ಚುನಾವಣೆಗಳು ಹೊಸದೇನೂ ಅಲ್ಲ. ಕೆಲವು ವರ್ಷಗಳ ಹಿಂದೆ ಗ್ರಾಮ ಸರಪಂಚ ಹುದ್ದೆಗೆ ಅವರು ಸ್ಪರ್ಧಿಸಿ ಪರಾಭವಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News