ದಲಿತ ದಂಪತಿ ಮೇಲೆ ಹಲ್ಲೆ; ಬೂಟಿನ ಮಾಲೆ ಧರಿಸಲು ಬಲವಂತ
ಸಾಂದರ್ಭಿಕ ಚಿತ್ರ (PTI)
ಅಶೋಕ ನಗರ (ಮಧ್ಯಪ್ರದೇಶ): ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯಲ್ಲಿ ಹಿರಿಯ ದಲಿತ ದಂಪತಿಯನ್ನು ಅಮಾನುಷವಾಗಿ ಥಳಿಸಿ, ಬೂಟಿನ ಮಾಲೆ ಧರಿಸುವಂತೆ ಬಲವಂತಪಡಿಸಿದ ಪ್ರಕರಣ ವರದಿಯಾಗಿದೆ.
ಈ ವೃದ್ಧ ದಂಪತಿಯ ಪುತ್ರ ಕೀಟಲೆ ಪ್ರಕರಣವೊಂದರಲ್ಲಿ ಷಾಮೀಲಾಗಿದ್ದ ಎಂದು ಹೇಳಲಾಗಿದೆ. ಹಲ್ಲೆ ಘಟನೆಗೆ ಸಂಬಂಧಿಸಿದಂತೆ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಂಗೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿಲೋರಾ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಆರೋಪಿಗಳ ಪೈಕಿ ಒಬ್ಬನ ಪತ್ನಿಯನ್ನು ಈ ದಂಪತಿಯ ಮಗ ಕೀಟಲೆ ಮಾಡಿದ್ದ ಎನ್ನಲಾಗಿದೆ. ಈ ಘಟನೆಯ ಬಳಿಕ ದಲಿತ ಕುಟುಂಬ ಗ್ರಾಮವನ್ನು ತೊರೆದಿತ್ತು ಎಂದು ಠಾಣಾಧಿಕಾರಿ ಗಬ್ಬರ್ ಸಿಂಗ್ ಗುಜ್ರಾರ್ ಹೇಳಿದ್ದಾರೆ. ಈ ದಂಪತಿ ಇತ್ತೀಚೆಗಷ್ಟೇ ಗ್ರಾಮಕ್ಕೆ ಆಗಮಿಸಿದ್ದರು.
ಶುಕ್ರವಾರ 65 ವರ್ಷದ ದಲಿತ ವ್ಯಕ್ತಿ ಹಾಗೂ ಆತನ 60 ವರ್ಷದ ಪತ್ನಿಯನ್ನು ಕಂಬಕ್ಕೆ ಕಟ್ಟಿಹಾಕಿ ಚೆನ್ನಾಗಿ ಥಳಿಸಲಾಗಿದೆ. ಬಳಿಕ ಬೂಟಿನ ಮಾಲೆಯನ್ನು ಧರಿಸುವಂತೆ ಬಲವಂತಪಡಿಸಲಾಗಿದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.