×
Ad

ಶಿಕ್ಷೆಯ ಅವಧಿ ನಂತರವೂ 4 ವರ್ಷ ಜೈಲಿನಲ್ಲಿ ಕಳೆದ ವ್ಯಕ್ತಿಗೆ 25 ಲಕ್ಷ ರೂ. ಪಾವತಿಸಲು ಮಧ್ಯಪ್ರದೇಶ ಸರಕಾರಕ್ಕೆ ಸುಪ್ರೀಂ ಆದೇಶ

Update: 2025-09-08 17:20 IST

ಸುಪ್ರೀಂ ಕೋರ್ಟ್ | PC : X

ಹೊಸದಿಲ್ಲಿ: ತನ್ನ ಏಳು ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರೂ ನಾಲ್ಕು ವರ್ಷ ಏಳು ತಿಂಗಳುಗಳ ಕಾಲ ಜೈಲಿನಲ್ಲಿಯೇ ಕೊಳೆತಿದ್ದ ವ್ಯಕ್ತಿಗೆ 25 ಲಕ್ಷ ರೂ.ಪರಿಹಾರವನ್ನು ಪಾವತಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಮಧ್ಯಪ್ರದೇಶ ಸರಕಾರಕ್ಕೆ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಆದೇಶವನ್ನು ಹೊರಡಿಸುವ ಮುನ್ನ ಮಧ್ಯಪ್ರದೇಶ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿತು.

ಶಿಕ್ಷೆಗೊಳಗಾಗಿದ್ದ ಸೋಹನ್ ಸಿಂಗ್ ಪರ ವಕೀಲ ಮಹ್ಫೂಜ್ ನಜ್ಕಿ ಅವರು,ತನ್ನ ಕಕ್ಷಿದಾರ ಅತ್ಯಾಚಾರ ಪ್ರಕರಣದಲ್ಲಿ ಕೆಲ ಸಮಯ ಜಾಮೀನಿನಲ್ಲಿ ಹೊರಗಿದ್ದರೂ 11 ವರ್ಷ ಮತ್ತು ಏಳು ತಿಂಗಳುಗಳ ಜೈಲುವಾಸವನ್ನು ಅನುಭವಿಸಿದ್ದಾನೆ. ಆದರೆ ನ್ಯಾಯಾಲಯವು ಆತನಿಗೆ ಕೇವಲ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು ಎಂದು ಪೀಠಕ್ಕೆ ತಿಳಿಸಿದರು.

ಸಿಂಗ್‌ಗೆ 25 ಲಕ್ಷ ರೂ.ಗಳ ಪರಿಹಾರವನ್ನು ಮಂಜೂರು ಮಾಡಿದ ಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ‘ದಾರಿ ತಪ್ಪಿಸುವ’ ಅಫಿಡವಿಟ್‌ಗಳನ್ನು ಸಲ್ಲಿಸಿದ್ದಕ್ಕಾಗಿ ಸರಕಾರದ ಪರ ವಕೀಲರನ್ನು ಪ್ರಶ್ನಿಸಿತು.

ಇಂತಹುದೇ ಸ್ಥಿತಿಯಲ್ಲಿರುವ ಇತರ ಜನರನ್ನು ಗುರುತಿಸುವಂತೆ ಮಧ್ಯಪ್ರದೇಶ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯವು ಸಿಂಗ್ ಪ್ರಕರಣಕ್ಕೆ ತೆರೆಯೆಳೆಯಿತು.

ಸರ್ವೋಚ್ಚ ನ್ಯಾಯಾಲಯವು ಆ.27ರಂದು ವಿಚಾರಣೆ ಸಂದರ್ಭದಲ್ಲಿ ಶಿಕ್ಷೆಯ ಅವಧಿ ಪೂರೈಸಿದ್ದರೂ ಸಿಂಗ್‌ನನ್ನು ನಾಲ್ಕು ವರ್ಷಗಳಿಗೂ ಅಧಿಕ ಸಮಯ ಜೈಲಿನಲ್ಲಿರಿಸಿದ್ದಕ್ಕೆ ರಾಜ್ಯ ಸರಕಾರದಿಂದ ವಿವರಣೆಯನ್ನು ಕೇಳಿತ್ತು.

ಅಪರಾಧಿಗಳು ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ ತಕ್ಷಣ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಹಲವಾರು ಸಲ ಒತ್ತಿ ಹೇಳಿದೆ.

ಅತ್ಯಾಚಾರ ಮತ್ತು ಇತರ ಅಪರಾಧಗಳ ಆರೋಪಿ ಸಿಂಗ್ ವಿಚಾರನೆಯನ್ನು ನಡೆಸಿದ್ದ ಸಾಗರ ಜಿಲ್ಲೆಯ ಖುರಾಯಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಸಿಂಗ್ ತನ್ನ ದೋಷನಿರ್ಣಯವನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಆತನ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ್ದ ಅದು ಜೀವಾವಧಿ ಶಿಕ್ಷೆಯನ್ನು ಏಳು ವರ್ಷಗಳ ಕಠಿಣ ಶಿಕ್ಷೆಗೆ ತಗ್ಗಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News