×
Ad

ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆಯಿದೆ: ಸುಪ್ರೀಂಕೋರ್ಟ್

► ‘ನೆರೆಹೊರೆಯಲ್ಲಿ ಏನಾಗುತ್ತಿದೆಯೆಂದು ನೋಡಿ’ ► ನೇಪಾಳ, ಬಾಂಗ್ಲಾದ ದಂಗೆಗಳನ್ನು ಉಲ್ಲೇಖಿಸಿದ ಸಿಜೆಐ

Update: 2025-09-10 21:57 IST

ಸುಪ್ರೀಂಕೋರ್ಟ್ | PC : PTI 

 

ಹೊಸದಿಲ್ಲಿ,ಸೆ.10: ಭಾರತದ ಸಂವಿಧಾನದ ಮಹತ್ವವನ್ನು ಮರುದೃಢಪಡಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ನೆರೆಹೊರೆಯ ರಾಷ್ಟ್ರಗಳಾದ ನೇಪಾಳ ಹಾಗೂ ಬಾಂಗ್ಲಾದೇಶಗಳಲ್ಲಿನ ರಾಜಕೀಯ ವಿಪ್ಲವಗಳ ಬಗ್ಗೆ ಗಮನಸೆಳೆದಿದೆ. ನೇಪಾಳದಲ್ಲಿ ಭುಗಿಲೆದ್ದ ಸರಕಾರ ವಿರೋಧಿ ಪ್ರತಿಭಟನೆಗೆ ಮಣಿದು ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡಿದ ಸನ್ನಿವೇಶವನ್ನು ಸರ್ವೋಚ್ಚ ನ್ಯಾಯಾಲಯ ಉಲ್ಲೇಖಿಸಿದೆ. ಕಳೆದ ವರ್ಷ ಬಾಂಗ್ಲಾದಲ್ಲಿ ವಿದ್ಯಾರ್ಥಿ ನೇತೃತ್ವದ ಜನದಂಗೆಯಲ್ಲಿ ಶೇಖ್ ಹಸೀನಾ ಸರಕಾರ ಪತನಗೊಂಡಿದ್ದನ್ನು ಕೂಡಾ ನ್ಯಾಯಾಲಯ ಪ್ರಸ್ತಾವಿಸಿದೆ.

‘‘ನಮ್ಮ ಸಂವಿಧಾನದ ಬಗ್ಗೆ ನಮಗೆ ಹೆಮ್ಮೆಯಿದೆ. ನೆರೆಹೊರೆಯ ರಾಷ್ಟ್ರಗಳಲ್ಲಿ ಏನಾಗುತ್ತಿದೆಯೆಂಬುದನ್ನು ನೋಡಿ’’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಹೇಳಿದ್ದಾರೆ.

ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅನುಮೋದನೆ ನೀಡಲು ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರಿಗೆ ನ್ಯಾಯಾಲಯಗಳು ಕಾಲಮಿತಿಯನ್ನು ವಿಧಿಸಬಹುದೇ ಎಂಬ ರಾಷ್ಟ್ರಪತಿ ಪ್ರಸ್ತಾವನೆಯ ಕುರಿತ ಪ್ರಕರಣದ ಆಲಿಕೆಯನ್ನು ನಡೆಸಿದ ಸಂದರ್ಭ ಸುಪ್ರೀಂಕೋರ್ಟ್ ಈ ಅನಿಸಿಕೆಯನ್ನು ವ್ಯಕ್ತಪಡಿಸಿದೆ.

ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬಳಿಕ ಪ್ರಧಾನಿ ಇಂದಿರಾಗಾಂಧಿ 1975ರಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದರು.

‘‘ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿಹೇರಿದಾಗ, ದೇಶದ ಜನತೆ ಚುನಾವಣೆಯಲ್ಲಿ ಎಂತಹ ಪಾಠ ಕಲಿಸಿದರೆಂದರೆ, ಆಡಳಿತ ಪಕ್ಷ ಸೋತಿದ್ದು ಮಾತ್ರವಲ್ಲದೆ, ಇಂದಿರಾಗಾಂಧಿಯವರೂ ಸ್ವಕ್ಷೇತ್ರದಲ್ಲಿ ಪರಾಭವಗೊಂಡರು. ಆನಂತರ ಅಧಿಕಾರಕ್ಕೇರಿದ ಸರಕಾರಕ್ಕೆ ಜನರನ್ನು ನಿಭಾಯಿಸಲು ಸಾಧ್ಯವಾಗದೆ ಇದ್ದಾಗ, ಅದೇ ಜನರು ಇಂದಿರಾ ಗಾಂಧಿಯವರನ್ನು ಮತ್ತೆ ಅಧಿಕಾರಕ್ಕೇರಿಸಿದರು’’ ಎಂದು ಮೆಹ್ತಾ ಹೇಳಿದರು.

ಆಗ ಸಿಜೆಐ ಗವಾಯಿ ಅವರು, ‘‘ಭರ್ಜರಿ ಬಹುಮತದೊಂದಿಗೆ’’ ಎಂದು ಧ್ವನಿಗೂಡಿಸಿದರು. ಆಗ ಮೆಹ್ತಾ ಉತ್ತರಿಸುತ್ತಾ, ‘‘ ಹೌದು, ಇದು ಸಂವಿಧಾನದ ಶಕ್ತಿಯಾಗಿದೆ ಎಂದರು. ಆದರೆ ತಾನಿಲ್ಲಿ ರಾಜಕೀಯ ವಾದವನ್ನು ಮಂಡಿಸುತ್ತಿಲ್ಲ ಎಂದು ಸರಕಾರದ ಪರ ವಕೀಲರು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News