×
Ad

ಸೌಲಭ್ಯ ಕೋಡಲು ಆಗದಿದ್ದರೆ ನ್ಯಾಯಮಂಡಳಿಗಳನ್ನು ರದ್ದುಗೊಳಿಸಿ: ಸುಪ್ರೀಂ ಕೋರ್ಟ್

Update: 2025-09-16 20:40 IST

ಸುಪ್ರೀಂ ಕೋರ್ಟ್ | PTI 

ಹೊಸದಿಲ್ಲಿ, ಸೆ. 16: ಹೈಕೋರ್ಟ್‌ ಗಳ ಮಾಜಿ ನ್ಯಾಯಾಧೀಶರು ನಿವೃತ್ತಿಯ ಬಳಿಕ ನ್ಯಾಯಮಂಡಳಿಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿರುವುದಕ್ಕೆ ಅಲ್ಲಿರುವ ಸೌಕರ್ಯಗಳ ಕೊರತೆಯೇ ಕಾರಣ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರಕ್ಕೆ ಸಾಧ್ಯವಾಗದಿದ್ದರೆ ಈ ನ್ಯಾಯಮಂಡಳಿಗಳನ್ನು ರದ್ದುಗೊಳಿಸಬೇಕು ಎಂಬುದಾಗಿಯೂ ಅದು ಹೇಳಿತು.

ಇಂಥ ನ್ಯಾಯಮಂಡಳಿಗಳಿಗೆ ಸೌಕರ್ಯಗಳನ್ನು ಕೊಡಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗದಿದ್ದರೆ, ಅವುಗಳನ್ನು ರದ್ದುಪಡಿಸಬೇಕು ಹಾಗೂ ಎಲ್ಲಾ ಪ್ರಕರಣಗಳನ್ನು ಹೈಕೋರ್ಟ್‌ ಗಳಿಗೆ ಕಳುಹಿಸಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.

‘‘ಅವರು ಯಾಕೆ ಅರ್ಜಿ ಹಾಕುತ್ತಾರೆ ಮತ್ತು ಸಂದರ್ಶನಕ್ಕೆ ಹಾಜರಾಗುತ್ತಾರೆ ಹಾಗೂ ಬಳಿಕ ಯಾಕೆ ಹುದ್ದೆಯನ್ನು ಸ್ವೀಕರಿಸುವುದಿಲ್ಲ? ಅದಕ್ಕೆ ಒಂದು ಕಾರಣವೆಂದರೆ, ನ್ಯಾಯಮಂಡಳಿಯ ಸದಸ್ಯನಾಗುವುದು ಎಂದರೆ ಏನು ಎಂಬ ವಾಸ್ತವ ಅವರಿಗೆ ಅರ್ಥವಾಗಿರುತ್ತದೆ. ಅವರ ಪೈಕಿ ಕೆಲವರು ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಾಧೀಶರು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು. ಅವರನ್ನು ನ್ಯಾಯಮಂಡಳಿಗಳ ಅಧ್ಯಕ್ಷರಾಗಿ ನೇಮಿಸಲಾಗುತ್ತದೆ. ಆದರೆ, ಅವರಿಗೆ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ. ಲೇಖನ ಸಾಮಗ್ರಿಗಳಿಗೂ ಅವರು ವಿನಂತಿ ಮಾಡುತ್ತಲೇ ಇರಬೇಕಾಗುತ್ತದೆ. ಇದು, ಸರಕಾರವು ನ್ಯಾಯಮಂಡಳಿಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನವುದನ್ನು ತೋರಿಸುತ್ತದೆ. ತಪ್ಪು ನಿಮ್ಮಲ್ಲಿದೆ. ನೀವು ನ್ಯಾಯಮಂಡಳಿಗಳನ್ನು ರಚಿಸಿದ್ದೀರಿ’’ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News