ಮತಾಂತರ ನಿಷೇಧ ಕಾನೂನುಗಳಿಗೆ ತಡೆಯಾಜ್ಞೆ ಕೋರುವ ಅರ್ಜಿ | ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ, ಸೆ. 16: ರಾಜ್ಯಗಳ ಮತಾಂತರ ನಿಷೇಧ ಕಾನೂನುಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಮಂಗಳವಾರ, ಈ ವಿಷಯದಲ್ಲಿ ಸಂಬಂಧಪಟ್ಟ ರಾಜ್ಯಗಳ ನಿಲುವುಗಳನ್ನು ಕೋರಿ ನೋಟಿಸ್ ಜಾರಿಗೊಳಿಸಿದೆ.
ರಾಜ್ಯಗಳು ತಮ್ಮ ನಿಲುವುಗಳನ್ನು ತಿಳಿಸಿದ ಬಳಿಕ, ಅರ್ಜಿಗಳ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.
ಉತ್ತರಗಳನ್ನು ಸಲ್ಲಿಸಲು ರಾಜ್ಯಗಳಿಗೆ ನ್ಯಾಯಾಲಯವು ನಾಲ್ಕು ವಾರಗಳ ಸಮಯಾವಕಾಶವನ್ನು ನೀಡಿತು ಮತ್ತು ಆ ಉತ್ತರಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ಅರ್ಜಿದಾರರಿಗೆ ಎರಡು ವಾರಗಳ ಸಮಯಾವಕಾಶವನ್ನು ನೀಡಿತು. ಮುಂದಿನ ವಿಚಾರಣೆಯನ್ನು ಆರು ವಾರಗಳ ಅವಧಿಗೆ ಮುಂದೂಡಿತು.
ಈ ನಡುವೆ, ಉತ್ತರಪ್ರದೇಶ ಮುಂತಾದ ರಾಜ್ಯಗಳು ಹಾಲಿ ಮತಾಂತರ ನಿಷೇಧ ಕಾನೂನುಗಳಿಗೆ ‘‘ಮತ್ತಷ್ಟು ಕಠೋರ’’ ಬದಲಾವಣೆಗಳನ್ನು ತಂದಿರುವುದನ್ನು ಗಮನದಲ್ಲಿರಿಸಿಕೊಂಡು, ಅರ್ಜಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಅರ್ಜಿದಾರರೊಬ್ಬರ ಪರವಾಗಿ ಹಾಜರಾಗಿರುವ ಹಿರಿಯ ವಕೀಲ ಸಿ.ಯು. ಸಿಂಗ್ ರಿಗೆ ನ್ಯಾಯಾಲಯ ಅನುಮತಿ ನೀಡಿತು.
ಉತ್ತರಪ್ರದೇಶ, ಮಧ್ಯಪ್ರದೇಶ, ಹಿಮಾಚಲಪ್ರದೇಶ, ಉತ್ತರಾಖಂಡ, ಛತ್ತೀಸ್‌ಗಢ, ಗುಜರಾತ್, ಹರ್ಯಾಣ, ಜಾರ್ಖಂಡ್ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಮತಾಂತರ ನಿಷೇಧ ಕಾನೂನುಗಳನ್ನು ಜಾರಿಗೆ ತಂದಿವೆ.
ಈ ಕಾನೂನುಗಳ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವಾರು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಪ್ರಕರಣದ ತುರ್ತು ವಿಚಾರಣೆಗೆ ಒತ್ತು ನೀಡಿದ ವಕೀಲ ಸಿಂಗ್, ಯಾರಾದರೂ ಅಂತರ್ ಧರ್ಮೀಯ ವಿವಾಹವಾದರೆ ಅವರಿಗೆ ಜಾಮೀನು ಸಿಗುವುದು ಅಸಂಭವ ಎಂದು ಹೇಳಿದರು.