ಪೊಲೀಸ್ ಠಾಣೆಗಳಲ್ಲೇಕೆ ಸಿಸಿಟಿವಿ ಕ್ಯಾಮೆರಾಗಳಿಲ್ಲ?: ರಾಜಸ್ಥಾನ ಸರಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
ಸುಪ್ರೀಂಕೋರ್ಟ್ | PTI
ಹೊಸದಿಲ್ಲಿ: ವಿಚಾರಣಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದ ಬಗ್ಗೆ ರಾಜಸ್ಥಾನ ಸರಕಾರಕ್ಕೆ ಮಂಗಳವಾರ ಸುಪ್ರೀಂಕೋರ್ಟ್ ಕಠಿಣ ಪ್ರಶ್ನೆಗಳನ್ನು ಕೇಳಿತು. ವಿಚಾರಣಾ ಕೊಠಡಿಗಳು ಸಿಸಿಟಿವಿ ಕ್ಯಾಮೆರಾಗಳಿರಬೇಕಾದ ಮುಖ್ಯ ಜಾಗಗಳು ಎಂದು ನ್ಯಾ. ವಿಕ್ರಂನಾಥ್ ಮತ್ತು ನ್ಯಾ. ಸಂದೀಪ್ ಮೆಹ್ತಾರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ಸಿಸಿಟಿವಿ ಅಳವಡಿಸಲು ವೆಚ್ಚವಾಗುತ್ತದೆ ಎಂದು ನ್ಯಾಯಾಲಯ ಒಪ್ಪಿಕೊಂಡರೂ, ಇದು ಮಾನವ ಹಕ್ಕುಗಳ ಪ್ರಶ್ನೆ ಎಂದು ಹೇಳಿತು. ಸಿಸಿಟಿವಿಯ ಗೈರಿನಲ್ಲಿ ಪೊಲೀಸ್ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದನ್ನು ನಿಮ್ಮ ಸರಕಾರ ಹೇಗೆ ಪ್ರತಿಪಾದಿಸುತ್ತದೆ ಎಂದು ರಾಜಸ್ಥಾನವನ್ನು ಪ್ರಶ್ನಿಸಿತು.
ಈ ಹಿನ್ನೆಲೆಯಲ್ಲಿ ವಿಚಾರಣಾ ಕೊಠಡಿಯಲ್ಲಿರುವ ಪೊಲೀಸ್ ಸಿಬ್ಬಂದಿಗಳು ಮಾತ್ರವಲ್ಲದೆ, ಬೀದಿಯಲ್ಲಿರುವ ಪೊಲೀಸರ ಕುರಿತೂ ನಿಗಾ ವಹಿಸಲು ಕೇಂದ್ರೀಕೃತ ವಿಷಯ ಸಂಗ್ರಹಣೆ ವ್ಯವಸ್ಥೆಯನ್ನು ನಿರ್ವಹಿಸಲು ಮೂರನೆಯ ವ್ಯಕ್ತಿಯನ್ನು ಒಳಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿತು.
"ಒಂದು ವೇಳೆ ಇನ್ಫೋಸಿಸ್ ತೆರಿಗೆ ವ್ಯವಸ್ಥೆಯನ್ನು ನಿಭಾಯಿಸಬಹುದಾದರೆ ಹಾಗೂ ಟಾಟಾ ಪಾಸ್‌ಪೋರ್ಟ್ ಸೇವೆಗಳನ್ನು ನಿರ್ವಹಿಸಬಹುದಾದರೆ, ಸಿಸಿಟಿವಿ ದೃಶ್ಯಾವಳಿಗಳ ಮೇಲೆ ನಿಗಾ ವಹಿಸಲು ಅಂತಹುದೇ ಸಂಸ್ಥೆಯೊಂದನ್ನು ಬಳಸಿಕೊಳ್ಳಬೇಕು" ಎಂದು ನ್ಯಾಯಾಲಯ ನಿರ್ದೇಶನ ನೀಡಿತು.
ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ರಾಜಸ್ಥಾನದಲ್ಲಿ ಪೊಲೀಸರ ವಶದಲ್ಲಿದ್ದ 11 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್, ಸೆಪ್ಟೆಂಬರ್ 4ರಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.