×
Ad

ಎಡರಂಗ ಸರಕಾರ ಪ್ರಶಂಸಿಸಿ ತರೂರ್ ಲೇಖನದ ವಿವಾದ | ಕೇರಳದ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಬುಲಾವ್

Update: 2025-02-25 23:06 IST

ಶಶಿ ತರೂರ್ (Photo: PTI)

ಹೊಸದಿಲ್ಲಿ : ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಸುದ್ದಿಪತ್ರಿಕೆಯಲ್ಲಿ ಪ್ರಕಟಿಸಿದ ಲೇಖನವೊಂದರಲ್ಲಿ ಎಡರಂಗ ಸರಕಾರದ ಅಭಿವೃದ್ಧಿ ಉಪಕ್ರಮಗಳನ್ನು ಶ್ಲಾಘಿಸಿರುವುದು ವಿವಾದಕ್ಕೆ ಗ್ರಾಸವಾದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಮಂಗಳವಾರ ಕೇರಳದ ತನ್ನ ಹಿರಿಯನಾಯಕರನ್ನು ಹಾಗೂ ಸಂಸದರನ್ನು ದಿಲ್ಲಿಗೆ ಬರುವಂತೆ ತಿಳಿಸಿದೆ.

ಕಾಂಗ್ರೆಸ್ ಪಕ್ಷದ ನೂತನ ಕಾರ್ಯಾಲಯದ ಇಂದಿರಾ ಭವನದಲ್ಲಿ ಶುಕ್ರವಾರ ಸಭೆ ನಡೆಯಲಿದ್ದು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವ ವಹಿಸಲಿದ್ದಾರೆ.

ಕೇರಳದ ಸ್ಥಳೀಯಾಡಳಿತ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷದಲ್ಲಿ ಹೊಗೆಯಾಡುತ್ತಿರುವ ಒಳಜಗಳವನ್ನು ಶಮನಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆಯೆಂದು ತಿಳಿದುಬಂದಿದೆ.

ಕಾಂಗ್ರೆಸ್ ಕ್ರಿಯಾ ಸಮಿತಿಯ ಕೇರಳ ರಾಜ್ಯದ ಸದಸ್ಯರಾದ ಶಶಿ ತರೂರ್, ಕೊಡಿಕುನ್ನಿಲ್ ಸುರೇಶ್, ರಮೇಶ್ ಚೆನ್ನಿತ್ತಲ ಹಾಗೂ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್, ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಅವರು ಸಭೆಯಲ್ಲಿ ಪಾಲ್ಗೊಳ್ಳುವ ಪ್ರಮುಖ ನಾಯಕರಲ್ಲಿ ಸೇರಿದ್ದಾರೆ.

ಪಕ್ಷದ ಇತರ ಹಿರಿಯ ನಾಯಕರಾದ ಮುಲ್ಲಪಳ್ಳಿ ರಾಮಚಂದ್ರನ್, ಯುಡಿಎಫ್ ಸಂಚಾಲಕ ಎಂ.ಎಂ.ಹಸ್ಸನ್ ಹಾಗೂ ವಿ.ಎಂ. ಸುಧೀರನ್ ಅವರು ಕೂಡಾ ಸಭೆಯಲ್ಲಿ ಪಾಲ್ಗೊಳ್ಳುವರು.

ಕಳೆದ ವಾರ ರಾಹುಲ್ ಜೊತೆ ತರೂರ್ ಮಾತುಕತೆ ನಡೆಸಿದ್ದರು. ರಾಷ್ಟ್ರಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷದಲ್ಲಿ ತನ್ನನ್ನು ಕಡೆಗಣಿಸಲಾಗುತ್ತಿರುವ ತರೂರ್ ಅವರು ಮಾತುಕತೆಯ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದ್ದಾರೆಂಮ ಅವರು ನಿಕಟವರ್ತಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್ ಪಕ್ಷವು ನಾಯಕತ್ವದ ಕೊರತೆಯನ್ನು ಎದುರಿಸುತ್ತಿದೆಯೆಂದು ತರೂರ್ ಅವರು ಈ ವಾರದ ಆರಂಭದಲ್ಲಿ ಬಹಿರಂಗವಾಗಿ ಹೇಳಿದ್ದರು. 2026ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ಕಾಂಗ್ರೆಸ್ ಪಕ್ಷದ ಮುಖವಾಗಿ ಬಿಂಬಿಸಬೇಕೆಂಬ ಅವರ ಹೇಳಿಕೆಯು ಪಕ್ಷದಲ್ಲಿ ಅಸಮಾಧಾನವನ್ನು ಸೃಷ್ಟಿಸುತ್ತದೆ.

ಈ ಮಧ್ಯೆ ಕೇರಳದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೆ ನೀಡಿ, ಮುಂಬರುವ ಸ್ಥಳೀಯಾಡಳಿತ ಚುನಾವಣೆಗಳಿಗೆ ಸಂಬಂಧಿಸಿ ಪಕ್ಷದ ಸಿದ್ಧತೆಯನ್ನು ಗಮನದಲ್ಲಿರಿಸಿಕೊಂಡು ಮಾತುಕತೆ ನಡೆಯಲಿದೆಯೆಂದು ತಿಳಿಸಿದರು.

►ಪಿಯೂಶ್ ಜೊತೆ ತರೂರ್ ಸೆಲ್ಫಿ ; ಬ್ರಿಟನ್ ಜೊತೆಗಿನ ಮುಕ್ತ ವ್ಯಾಪಾರ ನೀತಿಗೆ ಪ್ರಶಂಸೆ

ಹೊಸದಿಲ್ಲಿ, ಫೆ.25 ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಹಾಗೂ ಬ್ರಿಟನ್‌ನ ಉದ್ಯಮ ಹಾಗೂ ವ್ಯಾಪಾರ ಖಾತೆಯ ಸಹಾಯಕ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಜೊತೆಗಿರುವ ಸೆಲ್ಫಿ ಪೋಯೊವನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಪೋಸ್ಟ್ ಮಾಡಿರುವುದು ರಾಜಕೀಯವಲಯದಲ್ಲಿ ತೀವ್ರ ಊಹಾಪೋಹಗಳಿಗೆ ಎಡೆ ಮಡಿಕೊಟ್ಟಿದೆ. ಸೆಲ್ಫಿ ಜೊತೆಗೆ ಅವರು ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳಿಗೆ ಚಾಲನೆ ದೊರೆತಿರುವುದು ಸ್ವಾಗತಾರ್ಹವೆಂದು ಅವರು ಹೇಳಿದ್ದಾರೆ.

‘‘ ಉದ್ಯಮ ಹಾಗೂ ವ್ಯಾಪಾರ ಇಲಾಖೆಯ ಬ್ರಿಟನ್‌ ನ ಸಹಾಯಕ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಹಾಗೂ ಅವರ ಭಾರತೀಯ ಸಹವರ್ತಿ , ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಜೊತೆ ಮಾತುಕತೆ ನಡೆಸಿರುವುದು ಉತ್ತಮ’’ ಎಂದು ತರೂರ್ ಅವರು ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ಕ್ಕೆ ಪುನರುಜ್ಜೀವ ಗೊಂಡಿರುವುದು ಅತ್ಯಂತ ಸ್ವಾಗತಾರ್ಹ’’ ಎಂದು ತರೂರ್ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News