×
Ad

ಕಳೆದ 5 ವರ್ಷಗಳಲ್ಲಿ ಭಾರತೀಯ ಚುನಾವಣಾ ಆಯೋಗದ ಕುರಿತು ವಿಶ್ವಾಸ ಇಲ್ಲದ ಮತದಾರರ ಸಂಖ್ಯೆ ದ್ವಿಗುಣ!

Update: 2024-04-15 22:53 IST

ಜಮ್ಮು: ಕಳೆದ ಐದು ವರ್ಷಗಳಲ್ಲಿ ಭಾರತೀಯ ಚುನಾವಣಾ ಆಯೋಗ (ಇಸಿಐ)ದ ಮೇಲಿನ ಮತದಾರರ ವಿಶ್ವಾಸ ಕುಸಿದಿದೆ ಎಂದು ಸಿಎಸ್ಡಿಎಸ್-ಲೋಕನೀತಿ ನಡೆಸಿದ ಚುನಾವಣಾಪೂರ್ವ ಸಮೀಕ್ಷೆ ಬಹಿರಂಗಪಡಿಸಿದೆ.

ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ನಡೆಸಿದ ಸಮೀಕ್ಷೆ ಈ ಅವಧಿಯಲ್ಲಿ ಭಾರತೀಯ ಚುನಾವಣಾ ಆಯೋಗದ ಕುರಿತು ವಿಶ್ವಾಸ ಇಲ್ಲದ ಜನರ ಶೇಕಡವಾರು ಪ್ರಮಾಣ ಸರಿಸುಮಾರು ದ್ವಿಗುಣಗೊಂಡಿದೆ ಎಂದು ಹೇಳಿದೆ.

ಸಮೀಕ್ಷೆಗೆ ಒಳಪಡಿಸಲಾದ ಜನರಿಗೆ ‘‘ನೀವು ಚುನಾವಣಾ ಆಯೋಗವನ್ನು ಎಷ್ಟರ ಮಟ್ಟಿಗೆ ನಂಬುತ್ತೀರಿ? ಹೆಚ್ಚಿನ ಪ್ರಮಾಣದಲ್ಲಿ, ಸ್ಪಲ್ಪ ಮಟ್ಟಿಗೆ, ಹೆಚ್ಚು ಅಲ್ಲ ಅಥವಾ ಇಲ್ಲವೇ ಇಲ್ಲ’’ ಎಂಬ ಪ್ರಶ್ನೆಗಳನ್ನು ಕೇಳಲಾಗಿತ್ತು.

ಈ ಸಮೀಕ್ಷೆಯನ್ನು ಮಾರ್ಚ್ 28 ಹಾಗೂ ಎಪ್ರಿಲ್ 8ರ ನಡುವೆ ನಡೆಸಲಾಗಿತ್ತು. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ್, ಗುಜರಾತ್, ಹರ್ಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮಬಂಗಾಳ, ದಿಲ್ಲಿ, ಜಾರ್ಖಂಡ್, ಚತ್ತೀಸ್ಗಢ ಹಾಗೂ ತೆಲಂಗಾಣ ಸೇರಿದ 19 ರಾಜ್ಯಗಳ 10,019 ಮತರದಾರರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.

ಭಾರತೀಯ ಚುನಾವಣಾ ಆಯೋಗ ಕುರಿತು ‘ಹೆಚ್ಚಿನ ಪ್ರಮಾಣ’ದಲ್ಲಿ ವಿಶ್ವಾಸ ಇರಿಸಿದ ಮತದಾರರ ವರ್ಗದಲ್ಲಿ ಮಹತ್ತರ ಬದಲಾವಣೆ ಕಂಡು ಬಂದಿದೆ. 2019ರ ಸಮೀಕ್ಷೆಯಲ್ಲಿ ಪ್ರತಿ ಎರಡನೇ ಮತದಾರ ಇಸಿಐಯ ಕುರಿತು ‘‘ಹೆಚ್ಚಿನ ಪ್ರಮಾಣ’’ದಲ್ಲಿ ವಿಶ್ವಾಸ ಇರಿಸಿದ್ದರು. ಆದರೆ, 2024ರ ಚುನಾವಣೆಯ ಸಂದರ್ಭ ಇದರ ಪ್ರಮಾಣ ಸುಮಾರು ಅರ್ಧದಷ್ಟು ಅಂದರೆ ಶೇ. 51ರಿಂದ 26ಕ್ಕೆ ಇಳಿದಿದೆ.

ಆದರೆ, ಇಸಿಐ ಕುರಿತು ‘‘ಸ್ವಲ್ಪ ಮಟ್ಟಿಗೆ’’ ವಿಶ್ವಾಸವಿರಿಸಿದ ಮತದಾರರ ಶೇಕಡವಾರು ಸ್ವಲ್ಪ ಹೆಚ್ಚಾಗಿದೆ. ಅಂದರೆ ಶೇ. 27ರಿಂದ ಶೇ. 30ಕ್ಕೆ ಏರಿಕೆಯಾಗಿದೆ. ಇಸಿಐ ಕುರಿತು ವಿಶ್ವಾಸ ಇಲ್ಲದವರ ಮತದಾರರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಅಂದರೆ, ಶೇ. 7ರಿಂದ 14ಕ್ಕೆ ಏರಿಕೆಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News