×
Ad

Uttar Pradesh | ಮರ್ಯಾದೆಗೇಡು ಹತ್ಯೆ; ವಿದ್ಯುತ್ ಶಾಕ್ ನೀಡಿ ಯುವತಿಯ ಹತ್ಯೆಗೈದ ಆರೋಪ!

Update: 2026-02-01 20:46 IST

ಸಾಂದರ್ಭಿಕ ಚಿತ್ರ 

ಗೋಂಡಾ, ಫೆ. 1: ದೂರದ ಸಂಬಂಧಿಯೋರ್ವರನ್ನು ವಿವಾಹವಾಗಲು ಬಯಸಿದ್ದ 19 ವರ್ಷದ ಯುವತಿಯನ್ನು ಆಕೆಯ ತಂದೆ ಹಾಗೂ ಸಹೋದರ ಹತ್ಯೆಗೈದ ಘಟನೆ ಗೋಂಡಾ ಜಿಲ್ಲೆಯಲ್ಲಿ ನಡೆದಿದೆ. ಇದು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಥೊರ್ಹಾನ್ಸ್ ಗ್ರಾಮದ ಮನೆಯೊಂದರಲ್ಲಿ ಯುವತಿಯೊಬ್ಬಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಬಗ್ಗೆ ಶುಕ್ರವಾರ ಮಾಹಿತಿ ಸ್ವೀಕರಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.

112ಕ್ಕೆ ಮಾಡಲಾದ ಕರೆಯಲ್ಲಿ ಆಕೆಯನ್ನು ಹತ್ಯೆಗೈಯಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಮಾಹಿತಿ ಸ್ವೀಕರಿಸಿದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹದ ಪ್ರಾಥಮಿಕ ಪರೀಕ್ಷೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣದ ಕುರಿತು ತನಿಖೆ ಆರಂಭಿಸಿದರು.

ಪೊಲೀಸ್ ತಂಡ ಹಾಗೂ ಶ್ವಾನ ದಳದ ನೆರವಿನಿಂದ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿ ಹಾಗೂ ಇತರ ಪುರಾವೆಗಳ ಆಧಾರದಲ್ಲಿ ಯುವತಿಯ ತಂದೆ ಚಂದ್ರ ಪ್ರಕಾಶ್ ಮತ್ತು ಸಹೋದರ ರಾಹುಲ್ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಭಾವಿ ಪತಿ ಪರಮೇಶ್ವರ್ ಪಾಠಕ್ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಚಂದ್ರ ಪ್ರಕಾಶ್ ಹಾಗೂ ರಾಹುಲ್ನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಕೆ ತಮ್ಮ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಲು ಬಯಸಿದ್ದಳು. ಆದ್ದರಿಂದ ಆಕೆಯನ್ನು ಹತ್ಯೆಗೈದಿರುವುದಾಗಿ ಚಂದ್ರ ಪ್ರಕಾಶ್ ಹಾಗೂ ರಾಹುಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜನವರಿ 30ರಂದು ಆಕೆ ಮನೆಯಿಂದ ತೆರಳಲು ತಯಾರಿ ನಡೆಸುತ್ತಿದ್ದಳು. ಇದನ್ನು ತಿಳಿದ ತಂದೆ ಹಾಗೂ ಸಹೋದರ ಆಕೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ, ಆಕೆಯ ಕೈಕಾಲುಗಳನ್ನು ಕಟ್ಟಿದರು, ಬಾಯಿಯನ್ನು ಬಿಗಿದರು; ನಂತರ ವಿದ್ಯುತ್ ತಂತಿಯಿಂದ ಆಘಾತ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News