ದಿಲ್ಲಿಯಲ್ಲಿ ನೆತನ್ಯಾಹು ʼವಾಂಟೆಡ್ʼ ಪೋಸ್ಟರ್: ಘಟನೆ ಬಗ್ಗೆ ಬೆಲ್ಜಿಯಂ ಜೊತೆ ಚರ್ಚಿಸುವುದಾಗಿ ಹೇಳಿದ ಭಾರತ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಹೊಸದಿಲ್ಲಿ : ದಿಲ್ಲಿಯ ಚಾಣಕ್ಯಪುರಿ ಪ್ರದೇಶದಲ್ಲಿ ʼವಾಂಟೆಡ್ʼ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಫೋಟೋ ಇರುವ ಪೋಸ್ಟರ್ ಹಾಕಿರುವುದು ದಿಲ್ಲಿಯಲ್ಲಿರುವ ಬೆಲ್ಜಿಯಂ ರಾಯಭಾರಿ ಕಚೇರಿಯ ಸಿಬ್ಬಂದಿ ಎಂದು ವರದಿಯಾಗಿದೆ.
ಬೆಲ್ಜಿಯಂ ಜೊತೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ಕುರಿತು ಪ್ರಸ್ತಾಪಿಸುವುದಾಗಿ ಭಾರತ ತಿಳಿಸಿದೆ.
ಮೇ 29ರಂದು ʼಮಲ್ಚಾ ಮಾರ್ಗದ ಕಾರ್ಮೆಲ್ ಕಾನ್ವೆಂಟ್ ಶಾಲೆʼ ಮತ್ತು ʼಅಮೆರಿಕನ್ ಎಂಬೆಸ್ಸಿ ಶಾಲೆʼಯ ಬಳಿ ವಿದ್ಯುತ್ ಕಂಬಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಾಂಟೆಡ್ ಎಂದು ಪೋಸ್ಟರ್ ಹಾಕಲಾಗಿತ್ತು. ಈ ಕುರಿತು ತನಿಖೆಯನ್ನು ನಡೆಸಿದ ಪೊಲೀಸರು ಪೋಸ್ಟರ್ ಹಾಕಿರುವ ವ್ಯಕ್ತಿ ಬೆಲ್ಜಿಯಂ ರಾಯಭಾರಿ ಕಚೇರಿಯ ಸಿಬ್ಬಂದಿ ಎಂದು ಪತ್ತೆ ಹಚ್ಚಿ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಪ್ರತಿಕ್ರಿಯಿಸಿ, ಘಟನೆಯ ಬಗ್ಗೆ ನಮಗೆ ತಿಳಿದಿದೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ವಿಷಯವನ್ನು ಬೆಲ್ಜಿಯಂ ಜೊತೆ ಪ್ರಸ್ತಾಪಿಸುವುದಾಗಿ ತಿಳಿಸಿದೆ.