ಅಪಾಯಕಾರಿಯಾಗಿದ್ದರೂ ನಾವು ಅನ್ಯಾಯದ ವಿರುದ್ಧ ಮಾತನಾಡಬೇಕಿದೆ: 10 ವರ್ಷಗಳ ಜೈಲುವಾಸದ ಬಳಿಕ ಖುಲಾಸೆಗೊಂಡ ಜೆಎನ್‌ಯು ಮಾಜಿ ವಿದ್ಯಾರ್ಥಿ

Update: 2024-04-27 12:45 GMT

PC: indianexpress.com

ಹೊಸದಿಲ್ಲಿ: ‘ಮುಂದೇನು?’ ಇದು 10 ವರ್ಷಗಳ ಜೈಲುವಾಸದ ಬಳಿಕ ಖುಲಾಸೆಗೊಂಡು ಹೊರಬಂದಿರುವ ಮಾಜಿ ಜೆಎನ್‌ಯು ವಿದ್ಯಾರ್ಥಿ ಹೇಮ್ ಮಿಶ್ರಾ ಅವರೇ ಹೇಳುವಂತೆ ಅವರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ.....

‘ಆ ಹತ್ತು ವರ್ಷಗಳನ್ನು ನಾನು ಮರಳಿ ಪಡೆಯಲು ಸಾಧ್ಯವಿಲ್ಲ’ ಎಂದು ಮಿಶ್ರಾ ಹೇಳಿದರು. ಅವರನ್ನು 2013ರಲ್ಲಿ ಮಾವೋವಾದಿಗಳೊಂದಿಗೆ ನಂಟಿನ ಆರೋಪದಲ್ಲಿ ಮಹಾರಾಷ್ಟ್ರದಲ್ಲಿ ಬಂಧಿಸಲಾಗಿತ್ತು. ಮಿಶ್ರಾ,ದಿಲ್ಲಿ ವಿವಿಯ ಬೋಧಕ ಜಿ.ಎನ್.ಸಾಯಿಬಾಬಾ ಮತ್ತು ಇತರ ನಾಲ್ವರ ವಿರುದ್ಧ ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ಆರೋಪವನ್ನು ಹೊರಿಸಲಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಸಾಯಿಬಾಬಾ,ಮಿಶ್ರಾ ಮತ್ತು ಇತರ ನಾಲ್ವರ ಪೈಕಿ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಮಾ.5ರಂದು ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠವು ಮಿಶ್ರಾ,ಸಾಯಿಬಾಬಾ ಮತ್ತು ಇತರರನ್ನು ಖುಲಾಸೆಗೊಳಿಸಿತ್ತು. ಮೇ 7ರಂದು ಕೊಲ್ಲಾಪುರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡ ಮಿಶ್ರಾ ಘಾಜಿಯಾಬಾದ್‌ನ ವೈಶಾಲಿಯಲ್ಲಿಯ ತನ್ನ ಮನೆಗೆ ಮರಳಿದ್ದಾರೆ.

’ನಾನು ಕೆಲವು ವಿಷಯಗಳಲ್ಲಿ ಸರಕಾರದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು, ಅಷ್ಟೇ. ಈ ಭಿನ್ನಾಭಿಪ್ರಾಯದಿಂದಾಗಿ ನಾವೆಲ್ಲ ಶಿಕ್ಷೆಗೊಳಗಾಗಿದ್ದೆವು ಮತ್ತು ಒಂದು ದಶಕಕ್ಕೂ ಅಧಿಕ ಕಾಲ ಜೈಲಿನಲ್ಲಿ ಕೊಳೆಯಬೇಕಾಯಿತು. ನಾವು ಅನ್ಯಾಯಗಳ ವಿರುದ್ಧ ಮಾತನಾಡುವ ಅಗತ್ಯವಿದೆ, ಇಲ್ಲದಿದ್ದರೆ ನಮ್ಮ ಹಕ್ಕುಗಳನ್ನು ನಮ್ಮಿಂದ ಕಿತ್ತುಕೊಳ್ಳಲಾಗುತ್ತದೆ. ಅದು ಅಪಾಯಕಾರಿಯಾಗಿದ್ದರೂ ಸಹ ನಾವು ಧ್ವನಿಯೆತ್ತಲೇಬೇಕಿದೆ ’ ಎಂದು ಮಿಶ್ರಾ ಹೇಳಿದರು.

ತಾನು ಅಧ್ಯಯನವನ್ನು ಮುಂದುವರಿಸಲು ಬಯಸಿದ್ದೇನೆ ಎಂದು ಹೇಳಿದ ಮಿಶ್ರಾ,ಆದರೆ ಯಾವುದನ್ನು ಅಧ್ಯಯನ ಮಾಡಬೇಕು ಎನ್ನುವುದನ್ನು ತಾನಿನ್ನೂ ನಿರ್ಧರಿಸಬೇಕಿದೆ ಎಂದರು. 32ರ ಹರೆಯದಲ್ಲಿ ಬಂಧಿಸಲ್ಪಟ್ಟಾಗ ಅವರು ಜೆಎನ್‌ಯುದಲ್ಲಿ ಚೀನಿ ಭಾಷಾ ಕೋರ್ಸ್‌ನಲ್ಲಿ ತನ್ನ ಮೂರನೇ ವರ್ಷದ ವ್ಯಾಸಂಗವನ್ನು ಪೂರ್ಣಗೊಳಿಸಿದ್ದರು. ಅದಕ್ಕೂ ಮುನ್ನ ಅವರು ಉತ್ತರಾಖಂಡದಲ್ಲಿ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮಾಡಿದ್ದರು.

ಅವರ ಕುಟುಂಬ ಮೂಲತಃ ಉತ್ತರಾಖಂಡದ ಅಲ್ಮೋರಾದ ಕುಂಜ ಬಾರ್ಗಲ್ ಗ್ರಾಮಕ್ಕೆ ಸೇರಿದ್ದಾಗಿದೆ.

‘ನಾನು 12ನೇ ತರಗತಿಯನ್ನು ಮುಗಿಸಿದಾಗ ಪ್ರತ್ಯೇಕ ಉತ್ತರಾಖಂಡ ರಾಜ್ಯಕ್ಕಾಗಿ ಆಂದೋಲನ ನಡೆಯುತ್ತಿತ್ತು ಮತ್ತು ರಾಜ್ಯವು ಹೇಗಿರಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಬಳಿಕ ಜೆಎನ್‌ಯುಗೆ ಸೇರಿದಾಗ ಜನರು ಆದಿವಾಸಿಗಳ,ದಲಿತರ ಮತ್ತು ಸಾಮಾಜಿಕ ನ್ಯಾಯ ಸಮಸ್ಯೆಗಳಿಗೆ ಪ್ರತಿಕ್ರಿಯಿಸುತ್ತಿದ್ದ ಸ್ಪಂದನಶೀಲ ಕ್ಯಾಂಪಸ್ ನನ್ನ ಮುಂದಿತ್ತು. ಅಲ್ಲಿ ಚರ್ಚೆಗಳು ನಡೆಯುತ್ತಿದ್ದವು ಮತ್ತು ನಾನೂ ಅದರಲ್ಲಿ ಭಾಗವಹಿಸುತ್ತಿದ್ದೆ’ ಎಂದು ಮಿಶ್ರಾ ನೆನಪಿಸಿಕೊಂಡರು.

2013ರಲ್ಲಿ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಆಮ್ಟೆಯವರನ್ನು ಭೇಟಿಯಾಗಲು ಮಹಾರಾಷ್ಟ್ರದ ಗಡಚಿರೋಲಿಯಲ್ಲಿನ ಭಾಮ್ರಾಗಡಕ್ಕೆ ತೆರಳಿದ್ದಾಗ ಮಿಶ್ರಾರನ್ನು ಬಂಧಿಸಲಾಗಿತ್ತು. ಆಮ್ಟೆ ಆರೋಗ್ಯ ಸಮಸ್ಯೆಗಳ ಕುರಿತು ಆದಿವಾಸಿಗಳೊಂದಿಗೆ ಕೆಲಸ ಮಾಡಿದ್ದರು ಮತ್ತು ಆ ಬಗ್ಗೆ ಅವರನ್ನು ಭೇಟಿಯಾಗಲು ತಾನು ಬಯಸಿದ್ದೆ ಎಂದು ಮಿಶ್ರಾ ತಿಳಿಸಿದರು.

ಬಂಧನದ ಬಳಿಕ ಮೂರು ದಿನಗಳ ಕಾಲ ತನಗೆ ಏನನ್ನೂ ತಿಳಿಸಿರಲಿಲ್ಲ. ನಕ್ಸಲರ ಆಂದೋಲನ ಮತ್ತು ದಿಲ್ಲಿಯಲ್ಲಿನ ಪ್ರೆತಿಭಟನೆಗಳ ಬಗ್ಗೆ ತನ್ನನ್ನು ಪದೇ ಪದೇ ಪ್ರಶ್ನಿಸಲಾಗಿತ್ತು ಎಂದರು.

ಬಳಿಕ ಮಿಶ್ರಾರನ್ನು ನಾಗ್ಪುರ ಜೈಲಿಗೆ ರವಾನಿಸಲಾಗಿತ್ತು. ‘ಜೈಲು ಸೇರಿದ ಮೂರು ತಿಂಗಳುಗಳ ಬಳಿಕ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾವು ಪ್ರತಿಭಟನೆ ನಡೆಸಿದ್ದವು. ಆಗ ನಮ್ಮಲ್ಲಿ 15-15 ಜನರನ್ನು ಅಂಡಾ ಸೆಲ್‌ನಲ್ಲಿ ಇರಿಸಲಾಗಿತ್ತು ಮತ್ತು ಎರಡು ವರ್ಷಗಳಲ್ಲಿ ಹೆಚ್ಚಿನ ಅವಧಿಯನ್ನು ನಾನು ಅಲ್ಲಿಯೇ ಕಳೆದಿದ್ದೆ. ಅಂಡಾ ಸೆಲ್‌ನಲ್ಲಿ ಓರ್ವ ಕೈದಿಯನ್ನು ಮಾತ್ರ ಇರಿಸಲಾಗುತ್ತದೆ ಮತ್ತು ಇತರ ಸೆಲ್‌ಗಳಲ್ಲಿರುವವರನ್ನು ನೋಡುವುದೂ ಸಾಧ್ಯವಿಲ್ಲ. ನಾವು ಅದನ್ನು ಜೈಲಿನಲ್ಲಿಯ ಜೈಲು ಎಂದು ಕರೆಯುತ್ತಿದ್ದೆವು’ ಎಂದು ಮಿಶ್ರಾ ಹೇಳಿದರು.

2015ರಲ್ಲಿ ಮಿಶ್ರಾ ಜಾಮೀನು ಪಡೆದಿದ್ದರಾದರೂ 2017ರಲ್ಲಿ ನ್ಯಾಯಾಲಯವು ತಪ್ಪಿತಸ್ಥ ಎಂದು ಘೋಷಿಸಿದ ಬಳಿಕ ನಾಗ್ಪುರ್ ಜೈಲಿಗೆ ಮರಳಿದ್ದರು. ಕೊಲ್ಲಾಪುರ ಜೈಲಿಗೆ ಸಾಗಿಸುವ ಮುನ್ನ ಅವರನ್ನು ಅಮರಾವತಿ ಮತ್ತು ನಾಸಿಕ್‌ಗಳಲ್ಲಿಯ ಇತರ ಜೈಲುಗಳಲ್ಲಿ ಇರಿಸಲಾಗಿತ್ತು.

‘ವೃತ್ತಪತ್ರಿಕೆಗಳು ಮತ್ತು ಪುಸ್ತಕಗಳು ನನ್ನ ಸಂಗಾತಿಗಳಾಗಿದ್ದವು. ಅಲ್ಲಿ ನಾನು ಮರಾಠಿಯನ್ನು ಕಲಿತೆ ಮತ್ತು ಮರಾಠಿ ಕಲಿಯಲು ಇತರ ಕೈದಿಗಳಿಗೂ ನೆರವಾಗಿದ್ದೆ. ದಿಲ್ಲಿಗೆ ಚೀನಿ ಭಾಷೆ ಕಲಿಯಲು ಬಂದಿದ್ದೆ,ಆದರೆ ಮರಾಠಿ ಕಲಿತು ವಾಪಸಾಗಿದ್ದೇನೆ’ ಎಂದು ಮಿಶ್ರಾ ಹೇಳಿದರು.

ನಿವೃತ್ತ ಶಾಲಾ ಶಿಕ್ಷಕ ಕೆ.ಡಿ.ಮಿಶ್ರಾ ಮತ್ತು ಮಾಧವಿ ದೇವಿ ಅವರ ನಾಲ್ವರು ಮಕ್ಕಳಲ್ಲಿ ಮಿಶ್ರಾ ಕಿರಿಯವರು.

‘ನನ್ನ ಮಗನ ಸಂಕಷ್ಟ ನಮ್ಮನ್ನೂ ಸಂಕಷ್ಟಕ್ಕೆ ತಳ್ಳಿತ್ತು. ನಮ್ಮ ಬದುಕು ಹಾಳಾಗಿ ಹೋಗಿತ್ತು. 10-11 ವರ್ಷಗಳ ಕಾಲ ನಾವು ಅಳು, ಹೋರಾಟದಲ್ಲಿಯೇ ಕಳೆದಿದ್ದೆವು ’ ಎಂದು ಹೇಳಿದ ಮಾಧವಿ,‘ಬಂಧಿಸುವಂತಹ ಯಾವುದೇ ತಪ್ಪನ್ನು ನನ್ನ ಮಗ ಮಾಡಿರಲಿಲ್ಲ. ಅವನು ಬಡವರ ನಿಜವಾದ ಸಮಸ್ಯೆಗಳನ್ನು ಎತ್ತುತ್ತಿದ್ದ,ಅದಕ್ಕಾಗಿ ಕೆಲವೊಮ್ಮೆ ಹಾಡುತ್ತಿದ್ದ,ಡೋಲು ಬಾರಿಸುತ್ತಿದ್ದ ’ ಎಂದರು.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News