Manipur | ರಾಷ್ಟ್ರಪತಿ ಆಳ್ವಿಕೆ ಅಂತ್ಯ; ಮುಂದಿನ ಮುಖ್ಯಮಂತ್ರಿ ಯುಮ್ನಮ್ ಖೇಮ್ಚಂದ್ ಸಿಂಗ್
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ
Photo : x/YKhemchandSingh
ಹೊಸದಿಲ್ಲಿ: ಮಣಿಪುರದಲ್ಲಿ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು BJPಯ ಶಾಸಕಾಂಗ ಪಕ್ಷದ ನಾಯಕರಾಗಿ ಮಂಗಳವಾರ ಆಯ್ಕೆ ಮಾಡಿದೆ. ಇದರಿಂದ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.
ಈಶಾನ್ಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳ್ಳುವ ಕೆಲವೇ ದಿನಗಳ ಮುನ್ನ ದಿಲ್ಲಿಯಲ್ಲಿ ನಡೆದ ಮಣಿಪುರ ಬಿಜೆಪಿ ಶಾಸಕರ ಸಭೆಯ ಬಳಿಕ ಈ ನಿರ್ಧಾರ ಪ್ರಕಟವಾಗಿದೆ. ಸಭೆಯ ನಂತರ ಎನ್‌ಡಿಎ ಮೈತ್ರಿಕೂಟದ ಪಾಲುದಾರರು ಕೂಡ ಪ್ರತ್ಯೇಕವಾಗಿ ಸಭೆ ನಡೆಸಿ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.
ಮಣಿಪುರ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಮೇಲ್ವಿಚಾರಣೆಗಾಗಿ ಬಿಜೆಪಿ ಸಂಸದೀಯ ಮಂಡಳಿ ತರುಣ್ ಚುಗ್ ಅವರನ್ನು ಕೇಂದ್ರ ವೀಕ್ಷಕರಾಗಿ ನೇಮಿಸಿತ್ತು. “ಎಲ್ಲಾ ಶಾಸಕರಿಗೆ ದಿಲ್ಲಿಗೆ ಆಗಮಿಸುವಂತೆ ಸೂಚಿಸಲಾಗಿತ್ತು. 37 ಮಂದಿ ಶಾಸಕರು ಸಭೆಗೆ ಹಾಜರಾಗಿದ್ದರು. ಮೊದಲು ಸೋಮವಾರ ಸಂಜೆ ಸಭೆ ನಿಗದಿಯಾಗಿದ್ದರೂ, ಕೇಂದ್ರ ವೀಕ್ಷಕರ ನೇಮಕಾತಿ ಘೋಷಣೆಯ ಬಳಿಕ ಅದನ್ನು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು’’ ಎಂದು ರಾಜ್ಯ ಬಿಜೆಪಿ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಎಲ್ಲಾ ಎನ್‌ಡಿಎ ಪಾಲುದಾರರನ್ನು ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಸಭೆಗೆ ಆಹ್ವಾನಿಸಿರುವುದನ್ನು ದೃಢಪಡಿಸಿದ್ದರು. “ಎಲ್ಲಾ ಮೈತ್ರಿ ಪಾಲುದಾರರನ್ನು ಆಹ್ವಾನಿಸಲಾಗಿದೆ. ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ. ಸರ್ಕಾರ ನಿರಂತರ ಪ್ರಕ್ರಿಯೆ’’ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದರು.
ಕಳೆದ ವರ್ಷ ಎನ್. ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಬಳಿಕ ಫೆಬ್ರುವರಿ 13, 2025ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿತ್ತು. ಕುಕಿ–ಜೊ ಮತ್ತು ಮೈತೈ ಸಮುದಾಯಗಳ ನಡುವಿನ ಜನಾಂಗೀಯ ಉದ್ವಿಗ್ನತೆ ಹಾಗೂ ತಿಂಗಳುಗಟ್ಟಲೆ ನಡೆದ ಹಿಂಸಾಚಾರದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿತ್ತು.
ನಂತರ ಸಂಸತ್ತು ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ ಆರು ತಿಂಗಳು ವಿಸ್ತರಿಸಿತ್ತು. ಮಣಿಪುರ ಹಿಂಸಾಚಾರದ ತನಿಖೆಗೆ ರಚಿಸಲಾದ ಮೂವರು ಸದಸ್ಯರ ಆಯೋಗಕ್ಕೂ ಕೇಂದ್ರ ಗೃಹ ಸಚಿವಾಲಯವು ಅವಧಿ ವಿಸ್ತರಣೆ ಮಾಡಿದ್ದು, 2023ರ ಜೂನ್ 4ರಂದು ರಚನೆಯಾದ ಸಮಿತಿಗೆ ವರದಿ ಸಲ್ಲಿಸಲು ಮೇ 20, 2026ರವರೆಗೆ ಅವಕಾಶ ಕಲ್ಪಿಸಲಾಗಿದೆ.
VIDEO | Yumnam Khemchand Singh has been elected as the legislature party leader in Manipur, will be the next Chief Minister of the state.
— Press Trust of India (@PTI_News) February 3, 2026
(Full video available on PTI Videos - https://t.co/n147TvqRQz) pic.twitter.com/RoB2Tuk49F