×
Ad

"ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ, ರಾಷ್ಟ್ರವನ್ನೇ ಮಾರಿದ್ದಾರೆ": ಅಮೆರಿಕ–ಭಾರತ ವ್ಯಾಪಾರ ಒಪ್ಪಂದದ ಕುರಿತು ರಾಹುಲ್ ಗಾಂಧಿ ಆರೋಪ

"ಮೊದಲ ಬಾರಿಗೆ ವಿಪಕ್ಷದ ನಾಯಕರಿಗೆ ರಾಷ್ಟ್ರಪತಿಗಳ ಭಾಷಣದ ಕುರಿತು ಮಾತನಾಡಲು ಅವಕಾಶ ನೀಡಲಾಗಿಲ್ಲ"

Update: 2026-02-03 16:14 IST

ರಾಹುಲ್ ಗಾಂಧಿ (Photo: PTI)

ಹೊಸದಿಲ್ಲಿ, ಫೆ. 3: ಅಮೆರಿಕ–ಭಾರತ ವ್ಯಾಪಾರ ಒಪ್ಪಂದದ ವಿಚಾರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ, ದೇಶದ ಹಿತಾಸಕ್ತಿಯನ್ನು ಮಾರಿದ್ದಾರೆ” ಎಂದು ಅವರು ಆರೋಪಿಸಿದರು.

ಸಂಸತ್ ಆವರಣದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ವ್ಯಾಪಾರ ಒಪ್ಪಂದಕ್ಕೆ ಹಠಾತ್ ಸಹಿ ಹಾಕಿರುವುದು ಒತ್ತಡದ ಪರಿಣಾಮ ಎಂದು ಆರೋಪಿಸಿದರು. “ಮೋದಿ ಅವರು ಗೊಂದಲಕ್ಕೊಳಗಾಗಿದ್ದಾರೆ. ಅವರ ಮೇಲೆ ತೀವ್ರ ಒತ್ತಡವಿದೆ. ತಮ್ಮ ಇಮೇಜ್ ಹಾಳಾಗಬಹುದು ಎಂಬ ಭಯದಲ್ಲಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದರು.

ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯದ ಚರ್ಚೆಯ ವೇಳೆ ಚೀನಾ ವಿಷಯವನ್ನು ಪದೇಪದೇ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು. ನಿಯಮ ಉಲ್ಲಂಘನೆಯ ಉಲ್ಲೇಖದ ಆಧಾರದ ಮೇಲೆ ಪೀಠವು ತಡೆಯಿತು ಎಂದು ಅವರು ಹೇಳಿದರು.

“ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕರಿಗೆ ರಾಷ್ಟ್ರಪತಿಗಳ ಭಾಷಣದ ಕುರಿತು ಮಾತನಾಡಲು ಅವಕಾಶ ನೀಡಲಾಗಿಲ್ಲ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಸರಿಯಲ್ಲ. ಈ ವ್ಯಾಪಾರ ಒಪ್ಪಂದದಲ್ಲಿ ದೇಶದ ಕಠಿಣ ಪರಿಶ್ರಮವನ್ನೇ ಮಾರಲಾಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇದೇ ವೇಳೆ ಎಪ್ಸ್ಟೀನ್ ಫೈಲ್‌ಗಳ ವಿಷಯವನ್ನೂ ಪ್ರಸ್ತಾಪಿಸಿದ ಗಾಂಧಿ, ಅಂತರರಾಷ್ಟ್ರೀಯ ಮಟ್ಟದ ಕೆಲವು ಬೆಳವಣಿಗೆಗಳು ಪ್ರಧಾನಿಯ ಮೇಲೆ ಒತ್ತಡ ತಂದಿವೆ ಎಂದು ಹೇಳಿದರು. ಆದರೆ ಈ ಆರೋಪಗಳನ್ನು ಭಾರತ ಸರ್ಕಾರ ಈಗಾಗಲೇ ತಿರಸ್ಕರಿಸಿದೆ.

ಜನವರಿ 31ರಂದು ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆಯಲ್ಲಿ, ಎಪ್ಸ್ಟೀನ್ ಫೈಲ್‌ಗಳಿಗೆ ಸಂಬಂಧಿಸಿದೆ ಎಂದು ಹೇಳಲಾದ ಈಮೇಲ್‌ನಲ್ಲಿ ಪ್ರಧಾನಿಯವರ ಇಸ್ರೇಲ್ ಭೇಟಿ ಉಲ್ಲೇಖವಾಗಿರುವುದನ್ನು ಮಾತ್ರ ಗಮನಿಸಿರುವುದಾಗಿ ತಿಳಿಸಿತು. ಉಳಿದ ಎಲ್ಲಾ ಸೂಚನೆಗಳು ಆಧಾರರಹಿತವೆಂದು ಸ್ಪಷ್ಟಪಡಿಸಿತು. ಫೈಲ್‌ ಗಳಲ್ಲಿ ಪ್ರಧಾನಿಯವರ ಉಲ್ಲೇಖವು ಜುಲೈ 2017ರ ಇಸ್ರೇಲ್ ಅಧಿಕೃತ ಭೇಟಿಗೆ ಮಾತ್ರ ಸೀಮಿತವಾಗಿದೆ ಎಂದು ವಕ್ತಾರರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News