ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ವಿವಾದ: ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ
ಲೋಕಸಭೆಯಲ್ಲಿ ‘ಸರಂಡರ್ ಮೋದಿ’ ಘೋಷಣೆ
Photo: PTI
ಹೊಸದಿಲ್ಲಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ಸಂಸತ್ತಿನ ಎರಡೂ ಸದನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರು ತೀವ್ರ ಗದ್ದಲ ನಡೆಸಿದರು. ರಾಜ್ಯಸಭೆಯಲ್ಲಿ ಬಹುತೇಕ ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರೆ, ಲೋಕಸಭೆಯಲ್ಲಿ ನಿರಂತರ ಘೋಷಣೆಗಳ ನಡುವೆ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು.
ರಾಜ್ಯಸಭೆಯಲ್ಲಿ ಶೂನ್ಯ ವೇಳೆ ಮುಗಿದ ತಕ್ಷಣ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಿಷಯ ಪ್ರಸ್ತಾಪಿಸಿ, “ಒಪ್ಪಂದದ ಕುರಿತ ಮಾಹಿತಿಯನ್ನು ವಾಷಿಂಗ್ಟನ್‌ನಿಂದ ಪಡೆಯಲಾಗುತ್ತಿದೆ” ಎಂದು ಆರೋಪಿಸಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿ ಪ್ರತಿಭಟನೆ ಆರಂಭಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸದನದ ನಾಯಕ ಜೆ.ಪಿ. ನಡ್ಡಾ, “ಭಾರತೀಯ ಸರಕುಗಳ ಮೇಲಿನ ಸುಂಕ ಕಡಿತದ ವಿಚಾರವನ್ನು ಅಮೆರಿಕ ಅಧ್ಯಕ್ಷರಿಗೆ ತಿಳಿಸಲಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆದಿದೆ” ಎಂದರು. “ಸರ್ಕಾರವು ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸಲು ಸಿದ್ಧವಾಗಿದೆ. ಒಪ್ಪಂದದ ಎಲ್ಲಾ ಸೂಕ್ಷ್ಮ ವಿವರಗಳನ್ನು ಒದಗಿಸಲಾಗುವುದು. ಸರ್ಕಾರ ಸ್ವಯಂ ಪ್ರೇರಿತ ಹೇಳಿಕೆ ನೀಡಲಿದೆ” ಎಂದು ಭರವಸೆ ನೀಡಿದರು.
ವಿಪಕ್ಷಗಳ ನಡವಳಿಕೆಯನ್ನು ಟೀಕಿಸಿದ ಅವರು, “ವಿಪಕ್ಷಗಳ ಹತಾಶೆ ಹೊರಬರುತ್ತಿದೆ. ಒಳ್ಳೆಯದಲ್ಲಿಯೂ ಕೆಟ್ಟದ್ದನ್ನು ನೋಡಲಾಗುತ್ತಿದೆ. ಪ್ರತಿಯೊಂದು ವಿಷಯವನ್ನೂ ರಾಜಕೀಯಗೊಳಿಸುವ ಆಸಕ್ತಿ ಅವರದ್ದು. ಸರ್ಕಾರ ಚರ್ಚೆಯನ್ನು ತಪ್ಪಿಸುತ್ತಿದೆ ಎಂಬ ವಾತಾವರಣವನ್ನು ದೇಶದಲ್ಲಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಬೇಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ” ಎಂದು ಹೇಳಿದರು. “ನಿಮ್ಮ ಹತಾಶೆಯೇ ಮಾತನಾಡುತ್ತಿದೆ… ನೀವು ಈಗ ಸಮಸ್ಯೆಯಿಲ್ಲದ ಪಕ್ಷ” ಎಂದೂ ವ್ಯಂಗ್ಯವಾಡಿದರು.
ಇದಕ್ಕೂ ಮಧ್ಯೆ ವಿರೋಧ ಪಕ್ಷದ ಸದಸ್ಯರು “ದೇಶದ ಹಿತಾಸಕ್ತಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿ ಘೋಷಣೆಗಳನ್ನು ಮುಂದುವರಿಸಿದರು. ಸರ್ಕಾರ ಹೇಳಿಕೆ ನೀಡುತ್ತಿರುವಾಗ ಅದನ್ನು ಕೇಳಬೇಕು ಎಂದು ರಾಜ್ಯಸಭಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಸೂಚಿಸಿ, “ಸರ್ಕಾರ ಚರ್ಚೆಗೆ ಸಿದ್ಧವಾಗಿದೆ. ಆದರೆ ಸದನದಲ್ಲಿ ಗದ್ದಲ ಸೃಷ್ಟಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಟಿಎಂಸಿ ಹೊರತುಪಡಿಸಿ ಬಹುತೇಕ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದರು. ಟಿಎಂಸಿ ಸದಸ್ಯ ಸಾಕೇತ್ ಗೋಖಲೆ ಆರಂಭದಲ್ಲಿ ಸದನದಲ್ಲೇ ಇದ್ದರೂ ಸ್ವಲ್ಪ ಸಮಯದ ಬಳಿಕ ಹೊರನಡೆದರು. ದಿಲ್ಲಿ ಪೊಲೀಸರು ಎಸ್‌ಐಆರ್ ನಿಂದ ಸಂತ್ರಸ್ತ ಕುಟುಂಬಗಳನ್ನು ನಡೆಸಿಕೊಂಡ ರೀತಿಗೆ ವಿರೋಧವಾಗಿ ಪ್ರತ್ಯೇಕ ಸಭಾತ್ಯಾಗ ನಡೆಸಲಾಗಿದೆ ಎಂದು ಟಿಎಂಸಿ ತಿಳಿಸಿತು.
ಇದೇ ವೇಳೆ ಲೋಕಸಭೆಯಲ್ಲಿಯೂ ಗದ್ದಲ ಮುಂದುವರಿಯಿತು. ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಹಾಗೂ ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ ಸೇರಿದಂತೆ ಹಲವು ವಿಷಯಗಳನ್ನು ಉಲ್ಲೇಖಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ಗದ್ದಲದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನು ಮುಂದೂಡಿದರು. ಮತ್ತೆ ಸಭೆ ಸೇರಿದರೂ ಗಲಾಟೆ ಮುಂದುವರಿದ ಕಾರಣ ಮಧ್ಯಾಹ್ನ 2 ಗಂಟೆಗೆ ಮತ್ತೊಮ್ಮೆ ಮುಂದೂಡಲಾಯಿತು.
ನರವಣೆಯವರ ಪುಸ್ತಕದ ಭಾಗಗಳನ್ನು ಉಲ್ಲೇಖಿಸಲು ಅವಕಾಶ ನಿರಾಕರಿಸಿದ ವಿಚಾರವನ್ನು ಉಲ್ಲೇಖಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್ “ಆ ವಿಷಯವನ್ನು ಉಲ್ಲೇಖಿಸಬಾರದು” ಎಂದು ಸೂಚಿಸಿದರೂ ರಾಹುಲ್ ಗಾಂಧಿ ಪಟ್ಟು ಬಿಡಲಿಲ್ಲ. ಸದನದ ಬಾವಿಗಿಳಿದ ಸದಸ್ಯರು “ಸರಂಡರ್ ಮೋದಿ” ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇದಕ್ಕೆ ಸ್ಪೀಕರ್ ಪ್ರತಿಕ್ರಿಯಿಸಿ, “ಯೋಜಿತ ರೀತಿಯಲ್ಲಿ ಕಲಾಪಕ್ಕೆ ಅಡ್ಡಿಪಡಿಸುವುದು ಸದಸ್ಯರಿಗೆ ಯೋಗ್ಯವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಾಹ್ನ ಸದನ ಸೇರಿದಾಗ ಸಮಾಜವಾದಿ ಪಕ್ಷದ ಸದಸ್ಯರು ಮಣಿಕರ್ಣಿಕಾ ಘಾಟ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಕುರಿತು ವಿಷಯ ಪ್ರಸ್ತಾಪಿಸಿ ಘೋಷಣೆಗಳನ್ನು ಕೂಗಿದರು. ಈ ಬೆಳವಣಿಗೆಗಳ ನಡುವೆ ಲೋಕಸಭೆಯಲ್ಲೂ ಗದ್ದಲದ ವಾತಾವರಣ ಮುಂದುವರಿಯಿತು.