ಜೀವನದಲ್ಲಿ ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮಹತ್ವವಾಗಿದೆ. ಬಹುಪಾಲು ಜನರು ದೈಹಿಕ ಆರೋಗ್ಯಕ್ಕೆ ನೀಡುವಷ್ಟು ಕಾಳಜಿಯನ್ನು ಮಾನಸಿಕ ಆರೋಗ್ಯಕ್ಕೆ ನೀಡುವುದಿಲ್ಲ ಮತ್ತು ಮಾನಸಿಕ ಆರೋಗ್ಯ ಹದಗೆಡುವುದರಿಂದ ದೈಹಿಕ ಆರೋಗ್ಯ ಹದಗೆಡುತ್ತದೆ ಎಂಬ ಅರಿವನ್ನು ಹೊಂದಿರುವುದಿಲ್ಲ. ಮಾನಸಿಕ ಆರೋಗ್ಯದ ಮಹತ್ವದ ಕುರಿತಾಗಿ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಉದ್ದೇಶದಿಂದ ಪ್ರತೀವರ್ಷ ಅಕ್ಟೋಬರ್-10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾನಸಿಕ ಆರೋಗ್ಯವೆಂದರೆ ವ್ಯಕ್ತಿ ತನ್ನ ಸ್ವಂತ ಸಾಮರ್ಥ್ಯವನ್ನು ಅರಿತುಕೊಳ್ಳುವ, ಜೀವನದ ಸಾಮಾನ್ಯ ಒತ್ತಡಗಳನ್ನು ನಿಭಾಯಿಸುವ, ಉತ್ಪಾದಕವಾಗಿ ಮತ್ತು ಸ್ವತಂತ್ರವಾಗಿ ಕೆಲಸಮಾಡುವ ಮತ್ತು ಸಮುದಾಯಕ್ಕೆ ಕೊಡುಗೆ ನೀಡಲು ಸಾಧ್ಯವಾಗುವ ಯೋಗಕ್ಷೇಮದ ಸ್ಥಿತಿಯಾಗಿದೆ.
ಆಧುನಿಕ ಜೀವನ ಶೈಲಿಯಲ್ಲಿ ಕಂಡುಬರುತ್ತಿರುವ ಕೆಲಸದ ಒತ್ತಡಗಳು, ಕೌಟುಂಬಿಕ ಜವಾಬ್ದಾರಿಗಳು, ವೇಗದ ಬದುಕು, ಭವಿಷ್ಯದ ಬಗೆಗಿನ ಚಿಂತೆ, ಸ್ಪರ್ಧಾತ್ಮಕ ಮನೋಭಾವ, ಆರೋಗ್ಯಕರ ಬಾಂಧವ್ಯಗಳ ಕೊರತೆ, ನಕಾರಾತ್ಮಕ ಆಲೋಚನೆ, ಹತಾಶೆ ಮುಂತಾದವುಗಳಿಂದಾಗಿ ಜನರಲ್ಲಿ ಆತಂಕ, ಖಿನ್ನತೆ, ಮನೋಬೇನೆ, ವ್ಯಕ್ತಿತ್ವ ವಿಕಾರ, ಆತ್ಮಹತ್ಯೆಗೆ ಪ್ರಯತ್ನಿಸುವಿಕೆ, ಗೀಳುಚಟ, ಭಾವವಿಕಾರಗಳಂತಹ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಮಾನಸಿಕ ಸಮಸ್ಯೆಗಳು ಮನುಷ್ಯನ ದೈಹಿಕ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟುಮಾಡುತ್ತವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ದೈನಂದಿನ ಜೀವನದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ದಿಶೆಯಲ್ಲಿ ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅನುಸರಿಸಬೇಕಾದ ಮಾನೋವೈಜ್ಞಾನಿಕ ಆಪ್ತಸಲಹೆಗಳು ಕೆಳಕಂಡಂತಿವೆ.
ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು: ಮನಸ್ಸು ಮನುಷ್ಯನಲ್ಲಿರುವ ಅಗಾಧವಾದ ಶಕ್ತಿಯಾಗಿದೆ. ಮನುಷ್ಯನ ಪ್ರತಿಯೊಂದು ಕಾರ್ಯಚಟುವಟಿಕೆಗಳು ಮನಸ್ಸಿನಿಂದ ನಿಯಂತ್ರಿಸಲ್ಪಡುತ್ತವೆ ಮತ್ತು ನಿರ್ದೇಶಿಸಲ್ಪಡುತ್ತವೆ. ಆದ್ದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊದಲು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮನಸ್ಸಿನಲ್ಲಿರುವ ದುರಾಸೆ, ದ್ವೇಷ ಮುಂತಾದ ನಕಾರಾತ್ಮಕ ಅಂಶಗಳನ್ನು ತೆಗೆದುಹಾಕಬೇಕು.
ಸಕಾರಾತ್ಮಕ ಆಲೋಚನೆ: ಸಕಾರಾತ್ಮಕ ಆಲೋಚನೆಗಳು ನಮ್ಮ ದೇಹದಲ್ಲಿ ರಾಸಾಯನಿಕ ಸಮತೋಲನವನ್ನು ಕಾಪಾಡುವುದರಿಂದ ಮಾನಸಿಕ ಸ್ಥಿತಿಯು ಉತ್ತಮವಾಗಿರುತ್ತದೆ. ವ್ಯಕ್ತಿಯು ಜೀವನದಲ್ಲಿ ಕಷ್ಟದ ಸನ್ನಿವೇಶಗಳಿಗೆ ಸಿಲುಕಿದಾಗ ಮಾನಸಿಕವಾಗಿ ಕುಗ್ಗುತ್ತಾನೆ. ಆತನಲ್ಲಿ ಭಯ ಉಂಟಾಗಿ ಮಾನಸಿಕ ಒತ್ತಡ ಮತ್ತು ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಕಠಿಣ ಸಂದರ್ಭ ಮತ್ತು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಸಕಾರಾತ್ಮಕ ಆಲೋಚನೆಗಳು ಪ್ರಮುಖ ಪಾತ್ರ ವಹಿಸುವುದರೊಂದಿಗೆ ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತವೆ.
ವರ್ತಮಾನದಲ್ಲಿ ಬದುಕುವುದನ್ನು ಕಲಿಯುವುದು: ಬಹುಪಾಲು ವ್ಯಕ್ತಿಗಳು ಹೆಚ್ಚಾಗಿ ಭೂತಕಾಲದ ಘಟನೆಗಳು ಮತ್ತು ಭವಿಷ್ಯತ್ತಿನ ನಿರೀಕ್ಷೆಗಳ ಬಗೆಗೆ ಹೆಚ್ಚಾಗಿ ಚಿಂತಿಸುತ್ತಾರೆ. ಹಿಂದೆ ನಡೆದಿರುವ ಕಹಿಘಟನೆಗಳ ಬಗೆಗೆ ಅತಿಯಾಗಿ ಚಿಂತಿಸುವುದರಿಂದ ಮನಸ್ಸಿನಲ್ಲಿ ದುಃಖ ಉಂಟಾಗಿ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಭವಿಷ್ಯತ್ತಿನ ನಿರೀಕ್ಷೆಗಳ ಬಗ್ಗೆ ಅನಗತ್ಯವಾಗಿ ಚಿಂತಿಸುವುದರಿಂದ ಮನಸ್ಸನ್ನು ಭಯ ಆವರಿಸುತ್ತದೆ. ಇದರಿಂದಾಗಿ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ಭೂತ ಮತ್ತು ಭವಿಷ್ಯತ್ತಿನ ಚಿಂತೆಗಳನ್ನು ಬಿಟ್ಟು ವರ್ತಮಾನದ ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಸ್ವೀಕರಿಸಿ ವರ್ತಮಾನದಲ್ಲಿ ಬದುಕುವುದನ್ನು ಕಲಿಯುವುದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆರೋಗ್ಯಕರ ಜೀವನಶೈಲಿ: ದೈನಂದಿನ ಜೀವನದಲ್ಲಿ ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಮ, ಸಮರ್ಪಕ ನಿದ್ರೆ, ಸಮಯ ನಿರ್ವಹಣೆ, ಒತ್ತಡ ಮುಕ್ತ ಕಾರ್ಯನಿರ್ವಹಣೆ, ಸೃಜನಾತ್ಮಕ ಹವ್ಯಾಸಗಳು, ಭಾವನಾತ್ಮಕ ಸಂಬಂಧಗಳ ಸಮರ್ಪಕ ನಿರ್ವಹಣೆಯಂತಹ ಆರೋಗ್ಯಕರವಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಬಹುದು.
ಭಾವನಾತ್ಮಕ ಸ್ಥಿತಿಸ್ಥಾಪಕತ್ವ: ಭಾವನೆಗಳಿಲ್ಲದೆ ಬದುಕಿಗೆ ಅರ್ಥವಿರುವುದಿಲ್ಲ. ಜೀವನದಲ್ಲಿ ನಿರೀಕ್ಷೆಗಳು ಹುಸಿಯಾಗಿ ನಿರಾಸೆ, ಬೇಸರ, ದುಃಖ ಮುಂತಾದ ಭಾವನೆಗಳು ಎದುರಾದಾಗ ವ್ಯಕ್ತಿಯು ಆತ್ಮವಿಶ್ವಾಸವನ್ನು ಕಳೆದುಕೊಂಡು ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಆ ಸಂದರ್ಭದಲ್ಲಿ ವ್ಯಕ್ತಿಯು ನಕಾರಾತ್ಮಕ ಭಾವನೆಗಳಿಂದ ಹೊರಬಂದು ದೈನಂದಿನ ಜೀವನದಲ್ಲಿ ಕ್ರಿಯಾಶೀಲನಾಗಿ ಕಾರ್ಯಪ್ರವೃತ್ತನಾಗುವುದನ್ನು ರೂಢಿಸಿಕೊಳ್ಳಬೇಕಾಗಿದೆ.
ಆರೋಗ್ಯಕರ ಬಾಂಧವ್ಯ: ವ್ಯಕ್ತಿಯು ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಬೇಕಾದರೆ ಕೌಟುಂಬಿಕ, ಸಾಮಾಜಿಕ ಮತ್ತು ಜೌದ್ಯೋಗಿಕ ಕ್ಷೇತ್ರಗಳಲ್ಲಿ ಉತ್ತಮ ಬಾಂಧವ್ಯಗಳನ್ನು ಹೊಂದಿರಬೇಕು. ಬಾಂಧವ್ಯದಲ್ಲಿ ಪರಸ್ಪರ ನಂಬಿಕೆ, ಗೌರವ, ಪ್ರಾಮಾಣಿಕತೆ, ಬದ್ಧತೆ, ಸಹಕಾರ ಮತ್ತು ಸಹಾನೂಭೂತಿ ಗುಣಗಳು ಇರಬೇಕು. ಆರೋಗ್ಯಕರ ಸಂಬಂಧಗಳಲ್ಲಿ ಯಾವುದೇ ಮನಸ್ತಾಪಗಳಿಗೆ ಅವಕಾಶಗಳು ಇರುವುದಿಲ್ಲ. ಬದಲಾಗಿ ಭಾವನಾತ್ಮಕ ಭದ್ರತೆ, ಕಾಳಜಿ, ಆರೈಕೆ, ಬೆಂಬಲ ಕಂಡುಬರುತ್ತದೆ. ಆದ್ದರಿಂದ ಆರೋಗ್ಯಕರ ಬಾಂಧವ್ಯಗಳು ಮಾನಸಿಕ ಆರೋಗ್ಯದ ಸಂರಕ್ಷಣೆಗೆ ಸಹಾಯಕವಾಗುತ್ತವೆ.
ಅನಾರೋಗ್ಯಕರ ಅಭ್ಯಾಸಗಳಿಂದ ದೂರವಿರುವುದು: ಮದ್ಯಪಾನ, ಧೂಮಪಾನ, ಮಾದಕವ್ಯಸನ, ದೈಹಿಕ ಕಾರ್ಯಚಟುವಟಿಕೆಗಳ ನಿಷ್ಕ್ರಿಯತೆ, ಅಗತ್ಯಕ್ಕೂ ಮಿಗಿಲಾದ ಆಹಾರ ಸೇವನೆ, ನಕಾರಾತ್ಮಕ ಅಭ್ಯಾಸವುಳ್ಳ ಸ್ನೇಹಿತರ ಸಹವಾಸ, ಇಂಟರ್‌ನೆಟ್ ಮತ್ತು ಮೊಬೈಲ್ ವ್ಯಸನ ಮುಂತಾದ ಅನಾರೋಗ್ಯಕರ ಅಭ್ಯಾಸಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುತ್ತವೆ. ಆದ್ದರಿಂದ ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಲು ಅನಾರೋಗ್ಯಕರ ಅಭ್ಯಾಸಗಳಿಂದ ದೂರವಿರಬೇಕು.
ಜೀವನ ಕೌಶಲ್ಯ: ದೈನಂದಿನ ಜೀವನದಲ್ಲಿ ಎದುರಾಗುವ ಮಾನಸಿಕ ಒತ್ತಡಗಳು, ಘರ್ಷಣೆಗಳು, ಗೊಂದಲಗಳು, ಭಾವನಾತ್ಮಕ ತೊಂದರೆಗಳು, ಆತ್ಮವಿಶ್ವಾಸದ ಕೊರತೆ, ಖಿನ್ನತೆ, ಕೀಳರಿಮೆ ಮುಂತಾದವುಗಳು ಮಾನಸಿಕ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತವೆ. ಈ ಮಾನಸಿಕ ಸಮಸ್ಯೆಗಳನ್ನು ಸಮರ್ಥವಾಗಿ ತಡೆಗಟ್ಟಲು ಜೀವನ ಕೌಶಲಗಳು ಅವಶ್ಯಕ. ಸ್ವ-ಅರಿವಿನ ಕೌಶಲ, ಒತ್ತಡ ನಿರ್ವಹಣಾ ಕೌಶಲ, ಭಾವನಾತ್ಮಕ ನಿರ್ವಹಣಾ ಕೌಶಲ, ಸಂವಹನ ಕೌಶಲ, ಸಮಸ್ಯೆ ಬಗೆಹರಿಸುವ ಕೌಶಲ, ದೃಢವರ್ತನೆಯ ಜೀವನ ಕೌಶಲಗಳನ್ನು ಕಲಿತುಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಹಲವಾರು ಮಾನಸಿಕ ಸಮಸ್ಯೆಗಳಿಂದ ದೂರವಿದ್ದು ಮಾನಸಿಕ ಆರೋಗ್ಯವನ್ನು ಹೊಂದಬಹುದು.
ಮಾನಸಿಕ ತಜ್ಞರ ಸಲಹೆ: ದೈಹಿಕ ಅನಾರೋಗ್ಯಕ್ಕೆ ಪರಿಹಾರವಿರುವಂತೆ ಮಾನಸಿಕ ಸಮಸ್ಯೆಗಳಿಗೂ ಪರಿಹಾರವಿದೆ. ಮಾನಸಿಕ ಸಮಸ್ಯೆಗಳು ಕಂಡುಬಂದಾಗ ಯಾವುದೇ ಭಯ, ಮುಜುಗರ ಮತ್ತು ಹಿಂಜರಿಕೆ ಇಲ್ಲದೆ ಮುಕ್ತವಾಗಿ ಮಾನಸಿಕ ಆರೋಗ್ಯ ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟು ಮಾನಸಿಕ ತಜ್ಞರಿಂದ ಸೂಕ್ತ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆದು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮಾನಸಿಕ ಆರೋಗ್ಯ ಸದೃಢವಾಗಿದ್ದರೆ ದೈಹಿಕ ಆರೋಗ್ಯವು ಸದೃಢವಾಗಿರುತ್ತದೆ. ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಿದ ವ್ಯಕ್ತಿಗೆ ಸಾರ್ಥಕ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.