ನೈತಿಕ ಮನೋಭಾವ
ವ್ಯಕ್ತಿಗಳಿಗೆ ಸರಿ ಯಾವುದು? ತಪ್ಪು ಯಾವುದು? ಯಾವುದನ್ನು ಮಾಡಬೇಕು ಮತ್ತು ಮಾಡಬಾರದು? ಒಳಿತೆಂದರೆ ಏನು? ಕೆಡುಕೆಂದರೆ ಏನು; ಇವೆಲ್ಲವನ್ನೂ ಹೊರಗಿನಿಂದ ನಿರ್ಣಾಯಕವಾಗಿ ನೋಡಲು ಬರುವುದು. ಮನುಷ್ಯನಿಗೆ ತಿಳಿವಳಿಕೆ ಇರುತ್ತದೆ. ಆದರೆ, ಅದನ್ನು ಮಾಡಲು ವ್ಯಕ್ತಿಯ ಮನಸ್ಸು ಯಾವ ರೀತಿಯಲ್ಲಿ ಸಿದ್ಧವಾಗಿದೆ ಎಂಬುದು ಬಹಳ ಮುಖ್ಯ. ಅಂದರೆ, ಮನುಷ್ಯನಿಗೆ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದಿರುವುದಕ್ಕೂ, ಸರಿಯಾದುದನ್ನು ಮಾಡಲು ಮನಸ್ಸು ಸಿದ್ಧವಾಗಿರುವುದಕ್ಕೂ ಬಹಳ ವ್ಯತ್ಯಾಸವಿದೆ.
ಜಾತಿ ಭೇದ ಮಾಡಬಾರದು, ಅಸ್ಪಶ್ಯತೆ ಆಚರಿಸಬಾರದು ಎಂಬ ತಿಳಿವಳಿಕೆ ಇರಬಹುದು. ಆದರೆ ತನ್ನ ಕುಟುಂಬ ಜಾತ್ಯತೀತ ಮದುವೆ ಮಾಡಲು ಒಪ್ಪದಿರಬಹುದು. ತನ್ನ ಕುಟುಂಬದಲ್ಲಿ ರೂಢಿಯಲ್ಲಿ ಇರುವ ಅಸ್ಪಶ್ಯತೆ ಆಚರಣೆಯನ್ನು ನಿಲ್ಲಿಸದಿರಬಹುದು. ಅಹಿಂಸೆಯನ್ನು ತನ್ನ ಮಾತಿನಲ್ಲಿ ವೈಭವೀಕರಿಸಿದರೂ ತನ್ನ ಸಮುದಾಯ ಅಥವಾ ಕುಟುಂಬದವರು ಹಿಂಸಾತ್ಮಕವಾಗಿ ನಡೆದುಕೊಂಡ ಅದನ್ನು ಅನಿವಾರ್ಯ, ಅಗತ್ಯ ಅಥವಾ ಆತ್ಮರಕ್ಷಣೆ ಎಂದು ಸಮರ್ಥಿಸಿಕೊಳ್ಳಬಹುದು. ಹಾಗೆಯೇ ಪ್ರಾಮಾಣಿಕತೆಯನ್ನು ಮತ್ತು ಪ್ರಾಮಾಣಿಕವಾಗಿರುವವರನ್ನು ಕೊಂಡಾಡುವ ವ್ಯಕ್ತಿ ತಾನೇ ಲಂಚ ತೆಗೆದುಕೊಳ್ಳಬಹುದು, ಸುಳ್ಳು ಹೇಳಬಹುದು, ಕಳ್ಳತನ ಮಾಡಬಹುದು; ಅದಕ್ಕೆಲ್ಲಾ ತಕ್ಕಂತಹ ಸಮಜಾಯಿಷಿ ಕೂಡಾ ಕೊಡಬಹುದು.
ಇಲ್ಲಿಯೇ ನಾವು ಪ್ರಶ್ನಿಸಿಕೊಳ್ಳಬೇಕಾಗಿರು ವುದೇನೆಂದರೆ, ನೈತಿಕತೆ ಎಂದರೇನು? ಅದು ತಿಳಿವಳಿಕೆಯಲ್ಲ, ಭಾವನೆಯಲ್ಲ, ಅಭ್ಯಾಸವಲ್ಲ, ಒಪ್ಪಂದವಲ್ಲ; ನಿಜ. ಆದರೆ, ಇವೆಲ್ಲವೂ ಪರಸ್ಪರ ಪ್ರಭಾವಿಸುವ ಒಂದು ಮಾನಸಿಕ ಪ್ರಕ್ರಿಯೆ.
ನೈತಿಕ ಜ್ಞಾನ (Moral Knowledge) ಎಂಬುದು ಯಾವುದು ಸರಿ, ತಪ್ಪು ಎಂಬ ತಿಳಿವಳಿಕೆಯನ್ನು ಹೊಂದಿರುತ್ತದೆ. ನೈತಿಕ ಸಂವೇದನೆಯು (Moral Sensitivity) ತನ್ನ ವರ್ತನೆಯಿಂದ ಇತರರಿಗೆ ಉಂಟಾಗುವ ಪರಿಣಾಮಗಳನ್ನು ಗುರುತಿಸುವ ಸಾಮರ್ಥ್ಯವನ್ನು ನೀಡುತ್ತದೆ. ನೈತಿಕ ವಿವೇಚನೆ (Moral Reasoning) ಎಂದರೆ ಒಂದು ನಿರ್ಧಾರ ನ್ಯಾಯಸಮ್ಮತವೇ ಎಂದು ಪರಿಶೀಲಿಸುವ ಸಾಮರ್ಥ್ಯ ಎಂದು ಪರಿಗಣಿಸಬಹುದು. ನೈತಿಕ ಪ್ರೇರಣೆ (Moral Motivation) ಎಂದರೆ ಅನುಕೂಲ ಅಥವಾ ಒತ್ತಡಕ್ಕೆ ವಿರುದ್ಧವಾಗಿದ್ದರೂ ನ್ಯಾಯಯುತವಾಗಿ ವರ್ತಿಸುವ ಇಚ್ಛೆಯನ್ನು ಹೊಂದಿರುವುದು. ನೈತಿಕ ನಡತೆಯು (Moral Conduct) ತಾನು ಪರಿಗಣಿಸುವ ಎಲ್ಲಾ ಮೌಲ್ಯಗಳನ್ನು ತನ್ನ ವಾಸ್ತವಿಕ ಬದುಕಿನಲ್ಲಿ ಅನುಸರಿಸುವುದಾಗಿರುತ್ತದೆ. ಹಾಗೆ ನೋಡಲು ಹೋದರೆ ಈ ಐದೂ ಪರಸ್ಪರ ಸಂಬಂಧ ಹೊಂದಿದ್ದರೂ ಎಲ್ಲವೂ ಒಂದೇ ಅಲ್ಲ. ಆದರೆ ನೈತಿಕ ಮನಸ್ಸು ಎಂದರೆ ಏನು ಎಂದು ಅರ್ಥಮಾಡಿಕೊಳ್ಳಲು ಈ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಭಾರತದ ಮನೋಚರಿತ್ರೆಯಲ್ಲಿ ನೈತಿಕ ಮನಸ್ಸು ರೂಪುಗೊಂಡಿರುವ ವಿಧಾನವೇ ಒಂದು ಕುತೂಹಲ ಮತ್ತು ಆಸಕ್ತಿದಾಯಕ. ಮಾನವೀಯ ವರ್ತನೆಯ ಅಧ್ಯಯನದಲ್ಲಿ ನೈತಿಕತೆಯನ್ನು ಮನೋವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದರಿಂದ ನೈತಿಕ ಪ್ರಜ್ಞೆಯ ಉಗಮ, ವಿಕಾಸ, ಸಾಮಾಜಿಕ ಪ್ರಭಾವಗಳು ಮತ್ತು ಅವುಗಳ ರೂಢೀಕರಣಗಳೆಲ್ಲವೂ ತಿಳಿಯುವುದು.
ಮೊದಲನೆಯದಾಗಿ ನೈತಿಕ ಮನಸ್ಸು ಎಂದರೇನು ಎಂದು ತಿಳಿಯುವುದು ಮುಖ್ಯ. ಮನುಷ್ಯ ತನ್ನ ಬದುಕಿನಲ್ಲಿ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಕೆಲವು ನಿರ್ಧಾರಗಳು ಅವನ ವೈಯಕ್ತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿರುತ್ತದೆ. ಇನ್ನೂ ಕೆಲವು ತನ್ನ ಜೊತೆಗೆ ಬದುಕುತ್ತಿರುವ ಸಹಜೀವಿಗಳ ಜೀವನಗಳ ಮೇಲೂ ಕೂಡಾ ತನ್ನ ಪ್ರಭಾವವನ್ನು ಬೀರುತ್ತದೆ. ಮತ್ತೆ ಇನ್ನೂ ಕೆಲವು ನಿರ್ಧಾರಗಳು ತಾನು ಬಾಳುವ ಸಮಾಜದ ಹಿತ ಮತ್ತು ಅಹಿತಗಳಿಗೆ ಕಾರಣವಾಗಿರುತ್ತವೆ. ಹಾಗಿರುವಾಗ ವ್ಯಕ್ತಿಯು ತನ್ನ ವರ್ತನೆಯಿಂದ ಇತರರ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಗುರುತಿಸುವುದು, ಅವುಗಳ ನ್ಯಾಯ ಮತ್ತು ಅನ್ಯಾಯಗಳನ್ನು ಪರಿಶೀಲಿಸುವುದು ಮತ್ತು ತನ್ನ ಸ್ವಾರ್ಥವನ್ನು ಮೀರಿ ಇತರರ ಹಿತವನ್ನೂ ಪರಿಗಣಿಸುವ ಸಾಮರ್ಥ್ಯ; ಇವೆಲ್ಲವೂ ನೈತಿಕ ಮನಸ್ಸಿನ ಪ್ರಮುಖ ಲಕ್ಷಣಗಳಾಗಿವೆ.
ಹಾಗೆ ನೋಡಲು ಹೋದರೆ ನೈತಿಕ ಮನಸ್ಸು ಎಂಬುದು ಮನೋವಿಜ್ಞಾನದಲ್ಲಿ ಪ್ರತ್ಯೇಕವಾಗಿ ಗುರುತಿಸಿರುವ ಯಾವುದೇ ಒಂದು ಅಂಗವಿಲ್ಲ. ಆದರೆ, ನೈತಿಕ ಸಂವೇದನೆ, ಭಾವನೆ, ವಿವೇಚನೆ, ಪ್ರೇರಣೆ, ಅಭ್ಯಾಸ, ಸ್ವನಿಯಂತ್ರಣ ಮತ್ತು ಸಾಮಾಜಿಕ ಕಲಿಕೆಗಳ ಪರಸ್ಪರ ಕ್ರಿಯೆಯನ್ನು ಸೂಚಿಸಲು ಬಳಸುವಂತಹ ಒಂದು ಸಮಗ್ರ ಪರಿಕಲ್ಪನೆಯಾಗಿದೆ ಅಷ್ಟೇ.
ಆದರೆ ಯಾವುದೇ ಒಬ್ಬ ವ್ಯಕ್ತಿಯು ನೈತಿಕತೆಯನ್ನು ಪಾಲಿಸುವುದು ಕಾನೂನಿನ ಭಯದಿಂದಲೋ, ಸ್ವರ್ಗ-ನರಕಗಳ ಪರಿಕಲ್ಪನೆಯನ್ನು ನಂಬುವುದರಿಂದಲೋ, ತಾನು ಒಳ್ಳೆಯದು ಮಾಡಿದರೆ ತನಗೂ ಒಳ್ಳೆಯದಾಗುತ್ತದೆ ಎಂಬ ಬಯಕೆಯಿಂದಲೋ, ಸರಿಯಾಗಿ ನಡೆದುಕೊಳ್ಳದಿದ್ದರೆ ಶಿಕ್ಷೆ ಅನುಭವಿಸಬೇಕು ಅಥವಾ ದಂಡ ತೆರಬೇಕು ಎಂದೋ, ಬಹುಮಾನದ ಆಸೆಯಿಂದಲೋ, ಸಾಮಾಜಿಕ ಒಪ್ಪಿಗೆಯ ನಿರೀಕ್ಷೆಯಿಂದಲೋ ಅಥವಾ ತನ್ನದೇ ನೈತಿಕ ಪ್ರಜ್ಞೆಯಿಂದಲೋ? ಈ ಎಲ್ಲ ಕಾರಣಗಳೂ ಒಂದೇ ವ್ಯಕ್ತಿಯಲ್ಲಿಯೂ ಕೂಡಾ ಬೇರೆ ಬೇರೆ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಬಹುದು.
ಆದರೆ ಇತರರು ನೋಡದಿದ್ದರೂ, ಶಿಕ್ಷೆಯ ಭಯವಿಲ್ಲದಿದ್ದರೂ, ವೈಯಕ್ತಿಕ ಲಾಭವಿಲ್ಲದಿದ್ದರೂ ನ್ಯಾಯಯುತವಾಗಿ ವರ್ತಿಸಲು ವ್ಯಕ್ತಿ ಪ್ರಯತ್ನಿಸುತ್ತಿದ್ದಾನೆಂದರೆ ಅವನಲ್ಲಿ ಆಂತರೀಕರಣ ಗೊಂಡ ನೈತಿಕ ಮನೋಭಾವವಿದೆ ಎಂದು ಅರ್ಥ.
ಒಟ್ಟಾರೆ ನೈತಿಕ ಮನಸ್ಸಿನ ಪಕ್ವತೆ ಎಂದರೆ ವ್ಯಕ್ತಿ ಎಷ್ಟು ನೈತಿಕ ನಿಯಮಗಳನ್ನು ತಿಳಿದಿದ್ದಾನೆ ಎಂಬುದಕ್ಕಿಂತ, ಅವುಗಳನ್ನು ಎಷ್ಟು ವಿವೇಚನಾಪೂರ್ವಕವಾಗಿ ಮತ್ತು ಸ್ಥಿರವಾಗಿ ಅನುಸರಿಸುತ್ತಾನೆ ಎಂಬುದರಲ್ಲಿದೆ.
ತನ್ನದೇ ಆತ್ಮಸಂತೋಷಕ್ಕೆ, ತಾನೇ ಪಡುವ ಸಂಕೋಚದ ಕಾರಣಕ್ಕೆ, ತನಗೆ ಅವಕಾಶವಿದ್ದರೂ, ಸಾಮರ್ಥ್ಯವಿದ್ದರೂ ಮಾಡುವ ಭಯಕ್ಕೆ ಮನಸ್ಸು ನೈತಿಕವಾಗಿರಲು ಬಯಸುತ್ತದೆ. ಸಂತೋಷ, ಸಂಕೋಚ, ಭಯ, ತೃಪ್ತಿ ಮತ್ತು ಒತ್ತಡ ರಹಿತ ಭಾವ; ಎಲ್ಲವೂ ನೈತಿಕತೆಯ ಮಾನಸಿಕ ಅನುಭವಗಳು.
(ಅಂಕಣಕಾರರು: ಹಿರಿಯ ಬರಹಗಾರರು, ಚಿಂತಕರು)