ಶ್ಯಾಮ್‌ಪ್ರಸಾದ್ ಆತ್ಮಹತ್ಯೆಗೆ ಪ್ರೇರಣೆ: ಕಲ್ಲಡ್ಕ ಪ್ರಭಾಕರ್ ಭಟ್ ಬಂಧನ ಸಾಧ್ಯತೆ

Update: 2016-01-06 15:36 GMT

ಬೆಂಗಳೂರು, ಜ. 6: ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ರಾಮಕಥಾ ಗಾಯಕಿ ಪ್ರೇಮಲತಾ ಪತಿಯ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿ, ಆತ್ಮಹತ್ಯೆಗೆ ಮುನ್ನ ಪ್ರಕರಣ ಹಿಂಪಡೆಯುವಂತೆ ಬೆದರಿಕೆವೊಡ್ಡಿದ್ದ ಆರೆಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಸಿಐಡಿ ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ.
2014ರ ಸೆಪ್ಟಂಬರ್‌ನಲ್ಲಿ ಪ್ರೇಮಲತಾ ಅವರ ಪತಿ ದಿವಾಕರ ಶಾಸ್ತ್ರಿ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿ ಪುತ್ತೂರಿನ ಬಡೆಕ್ಕಿಲ ಗ್ರಾಮದಲ್ಲಿನ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆಗೆ ಸ್ವಾಮೀಜಿ ಬೆಂಬಲಿಗರ ಬೆದರಿಕೆಯೇ ಮೂಲ ಕಾರಣ ಎಂದು ಶಂಕಿಸಲಾಗಿತ್ತು.
ಈ ಮಧ್ಯೆ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಐಡಿ ಪೊಲೀಸರು, ಶ್ಯಾಮ್ ಪ್ರಸಾದ್ ಶಾಸ್ತ್ರಿಯವರ ಮೊಬೈಲ್‌ಗೆ ಬಂದ ದೂರವಾಣಿ ಕರೆ ವಿವರಗಳನ್ನು ಆಧರಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿ, ವಿಚಾರಣೆಯನ್ನೂ ನಡೆಸಿದ್ದರು. ಈ ವೇಳೆ ಪ್ರಭಾಕರ್ ಭಟ್, ‘ಶಾಸ್ತ್ರಿಗೆ ಕರೆ ಮಾಡಿದ್ದ್ದು ಸತ್ಯ. ಆದರೆ, ಯಾವುದೇ ಬೆದರಿಕೆವೊಡ್ಡಿಲ್ಲ’ ಎಂದು ಹೇಳಿಕೆ ನೀಡಿದ್ದರು.
ಶ್ಯಾಮ್‌ಪ್ರಸಾದ್ ಶಾಸ್ತ್ರಿ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಧ್ವನಿ ಮುದ್ರಿಕೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದ(ಫೋರೆನಿಕ್ಸ್) ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಧ್ವನಿ ಪತ್ತೆ ಪರೀಕ್ಷೆಯಲ್ಲಿ ಅದು ಕಲ್ಲಡ್ಕ ಪ್ರಭಾಕರ್ ಭಟ್ ಅವರದ್ದೇ ಧ್ವನಿ ಎಂಬುದು ದೃಢಪಟ್ಟಿದೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.
 ಆ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು, ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಯಾವುದೇ ಸಮಯದಲ್ಲೂ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆತ್ಮಹತ್ಯೆಗೆ ಪ್ರಚೋದನೆ ನೀಡುವುದು ಮೇಲ್ನೋಟಕ್ಕೆ ಗಂಭೀರ ಸ್ವರೂಪದ ಅಪರಾಧವಾಗುವುದಿಲ್ಲ. ಆದರೆ, ಅತ್ಯಾಚಾರ ಆರೋಪದಂತಹ ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ‘ಪ್ರಚೋದನೆ’ ನೀಡುವುದೂ ಕೊಲೆಗೆ ಸಮವೆಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿದೆ ಎಂಬುದು ಕಾನೂನು ತಜ್ಞರ ಅಭಿಮತ
ಹೀಗಾಗಿ ಕೂಡಿದ್ದ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧದ ಅತ್ಯಾಚಾರ ಆರೋಪದ ಪ್ರಕರಣ ಇದೀಗ ಆರೆಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಶ್ಯಾಮ್‌ಪ್ರಸಾದ್ ಶಾಸ್ತ್ರಿಗೆ ಬೆದರಿಕೆವೊಡ್ಡಿರುವ ಧ್ವನಿ ಪರೀಕ್ಷೆಯ ಖಚಿತತೆಯ ಹಿನ್ನೆಲೆಯಲ್ಲಿ ಹೊಸ ತಿರುವು ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News