ಅಕ್ರಮ ಮರಳು ದಂಧೆಗೆ ಮರುಳಾದ ಅಧಿಕಾರಿಗಳು

Update: 2016-01-12 18:19 GMT

ಜಿಲ್ಲಾಡಳಿತ ವೌನ: ನಾಗರಿಕರಿಂದ ಆಕ್ರೋಶ

ಬಂಟ್ವಾಳ, ಜ.12: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನೇತ್ರಾವತಿ ನದಿ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿ ನಡೆಯು ತ್ತಿದ್ದರೂ ಜಿಲ್ಲಾಡಳಿತ ವೌನವಹಿಸಿ ಕುಳಿತಿದ್ದು, ಸಾರ್ವಜನಿಕರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರು ತಾಲೂಕಿನ ಉಳ್ಳಾಲ, ನೇತ್ರಾವತಿ ಸೇತುವೆಯ ಕೆಭಾಗ, ಕುದ್ರು, ಅಡಂ ಕುದ್ರು, ಕಣ್ಣೂರು, ಅಡ್ಯಾರ್, ಬೈತ್ತಾರ್, ವಳಚ್ಚಿಲ್, ಆರ್ಕುಳ, ಬಂಟ್ವಾಳ ತಾಲೂಕಿನ ಫರಂಗಿಪೇಟೆ, ಹತ್ತನೆ ಮೈಲುಗಲ್ಲು, ತುಂಬೆ, ಕೆಳಗಿನ ತುಂಬೆ, ಸಜಿಪ, ಪರ್ಲ್ಯ, ಶಾಂತಿ ಯಂಗಡಿ, ಪಾಣೆಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ನೇತ್ರಾವತಿ ನದಿ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿ ನಡೆಯುತ್ತಿದೆ. ಪ್ರತಿ ದಿನ ಈ ಪ್ರದೇಶಗಳಿಂದ ನೂರಾರು ಲಾರಿಗಳಲ್ಲಿ ಮರಳು ಅಕ್ರಮವಾಗಿ ಸಾಗಾಟವಾಗುತ್ತಿದೆ.

ಹಗಲು ರಾತ್ರಿ ಎನ್ನದೆ ಬೆಂಗಳೂರು ಕಡೆಗೆ ಮಂಗಳೂರು-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಲಾರಿಗಳು ಸಾಲುಗಟ್ಟಿ ಸಂಚಾರಿಸುತ್ತಿವೆ ಯಾದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ನಿದ್ರೆಗೆ ಶರಣಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಮಿತಿ ಮೀರಿದ ಮರಳು ಸಾಗಾಟದ ಲಾರಿಗಳಿಂದ ಆಗಾಗ ಟ್ರಾಫಿಕ್ ಜಾಮ್, ಅಪಘಾತಗಳು ಸಂಭವಿಸುತ್ತಿದೆ. ಅಲ್ಲದೆ, ನಿಗದಿಗಿಂತ ಹೆಚ್ಚಿನ ಮರಳು ತುಂಬುವುದರಿಂದ ಮರಳು ರಸ್ತೆಗೆ ಚೆಲ್ಲುತ್ತಿದ್ದು, ದ್ವಿಚಕ್ರ ಸವಾರರು ನರಕಯಾತನೆ ಅನುಭವಿಸು ತ್ತಿದ್ದಾರೆ. ಮರಳು ಲಾರಿಗಳು ರಸ್ತೆಯಲ್ಲಿ ಅಲ್ಲಲ್ಲಿ ಕೆಟ್ಟು ನಿಲ್ಲುವು ದರಿಂದ ಸುಗಮ ಸಂಚಾರಕ್ಕೆ ಕೂಡಾ ತೊಡಕುಂಟಾ ಗುತ್ತಿದೆ. ಇವೆಲ್ಲವನ್ನು ಕಣ್ಣಾರೆ ಕಂಡರೂ ಅಧಿಕಾರಿಗಳು ಮಾತ್ರ ವೌನವಾಗಿದ್ದಾರೆ ಎಂದು ಸಾರ್ವಜನಿಕರು ಆರೋ ಪಿಸುತ್ತಿದ್ದಾರೆ.

10, 12 ಚಕ್ರಗಳ ಲಾರಿಗಳಲ್ಲಿ ಸಾಗಾಟ

6ಕ್ಕಿಂತ ಹೆಚ್ಚಿನ ಚಕ್ರಗಳ ಲಾರಿಗಳಲ್ಲಿ ಮರಳು ಸಾಗಿಸಬಾರದೆಂದು ರಾಜ್ಯ ಸರಕಾರದ ಸ್ಪಷ್ಟ ಆದೇಶವಿದ್ದರೂ, ಸರಕಾರದ ಆದೇಶವನ್ನು ಉಲ್ಲಂಘಿಸಿ 10, 12 ಚಕ್ರಗಳ ಲಾರಿಗಳಲ್ಲಿ ಮರಳು ಸಾಗಿಸಲಾಗುತ್ತಿದೆ. ಇಷ್ಟೆ ಅಲ್ಲದೆ ಪ್ರತಿಯೊಂದು ಲಾರಿಯಲ್ಲಿ ಕೂಡಾ ನಿಗದಿಗಿಂತ ಹೆಚ್ಚಿನ ಮರಳು ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಕಂಟೇನರ್‌ಗಳಲ್ಲೂ ಮರಳು ಸಾಗಿಸಲಾಗುತ್ತಿದೆ.

ಹಿಟಾಚಿ, ಜೆಸಿಬಿ ಬಳಕೆ:
ಮರಳನ್ನು ನದಿಯಿಂದ ಮಾನವ ಶ್ರಮದಿಂದಲೇ ತೆಗೆಯಬೇಕೆಂದು ಸರಕಾರದ ಆದೇಶವಿದೆ. ಆದರೂ ಬಂಟ್ವಾಳ, ಮಂಗಳೂರು ನದಿಬದಿಯ ಹಲವು ಕಡೆಗಳಲ್ಲಿ ಹಿಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿ ನದಿಯಿಂದ ಮರಳು ತೆಗೆಯಲಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ದಂಡಕ್ಕೆ ಜಗ್ಗದ ಮಾಫಿಯಾ: ಅಕ್ರಮ ಮರಳು ಸಾಗಾಟ ಹಾಗೂ ನಿಯಮ ಉಲ್ಲಂಘಿಸುವ ಲಾರಿಗಳಿಗೆ ಅಧಿಕಾರಿಗಳು ದಂಡ ವಿಧಿಸಿದರೂ ಮರಳು ಮಾಫಿಯಾ ಕ್ಯಾರೇ ಅನ್ನುತ್ತಿಲ್ಲ. ಬೆಂಗಳೂರಿನಲ್ಲಿ ಲೋಡ್ ಮರಳಿಗೆ 30ರಿಂದ 40 ಸಾವಿರ ರೂ. ಬೆಲೆ ಇರುವುದರಿಂದ ಅಧಿಕಾರಿಗಳು ವಿಧಿಸುವ ಮೂರು-ನಾಲ್ಕು ಸಾವಿರ ದಂಡವನ್ನು ಮರಳು ಮಾಫಿಯಾದವರು ಸುಲಭವಾಗಿ ಕಟ್ಟಿ ತಮ್ಮ ದಂಧೆಯನ್ನು ಮುಂದುವರಿಸುತ್ತಾರೆ. ಆದ್ದರಿಂದ ಅಕ್ರಮ ಹಾಗೂ ನಿಯಮ ಉಲ್ಲಂಘಿಸುವ ಮರಳು ಲಾರಿಗಳನ್ನು ಮುಟ್ಟುಗೋಲು ಹಾಕಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸುತ್ತಾರೆ.

ದಿನಕ್ಕೆ ಲಕ್ಷಾಂತರ ರೂ. ಸಂಪಾದನೆ!

ಮರಳು ಮಾಫಿಯಾದ ಪೂರ್ವಪರ ಹಿನ್ನೆಲೆಯನ್ನು ಸಂಪೂರ್ಣವಾಗಿ ತಿಳಿದಿರುವ ವ್ಯಕ್ತಿಗಳೇ ಹೇಳುವ ಪ್ರಕಾರ, ಆರು ಚಕ್ರದ ಒಂದು ಲಾರಿ ಮರಳಿಗೆ 7 ಸಾವಿರ ರೂ. ಅಸ ಲಾಗುತ್ತದೆ. ಊರಿನಲ್ಲಾದರೆ 15ರಿಂದ 16 ಸಾವಿರಕ್ಕೆ ಮಾರಾಟ ಮಾಡ ಲಾಗುತ್ತದೆ. 5 ಸಾವಿರ ರೂ. ಲಾಭ ಪಡೆಯಲಾಗುತ್ತದೆ. ಅದೇ ಮರಳನ್ನು ಬೆಂಗಳೂರು ಕಡೆಗೆ ಸಾಗಿಸಿ, 30ರಿಂದ 35 ಸಾವಿರ ರೂ.ಗೆ ಮಾರಾಟ ಮಾಡಲಾಗು ತ್ತದೆ. ಡೀಸೆಲ್, ಸಂಬಳ ಹೊರತುಪಡಿಸಿ 10ರಿಂದ 15 ಸಾವಿರ ಲಾಭ ಪಡೆಯಲಾಗುತ್ತದೆ. ಹೀಗೆ ದಿನವೊಂದಕ್ಕೆ 15ರಿಂದ 20 ಲಾರಿ ಮರಳು ಸಾಗಾಟ ಮಾಡಲಾಗುತ್ತದೆ. ರಾಜ ಕೀಯ ಪ್ರಭಾವ ಇಲ್ಲದ ವ್ಯಕ್ತಿಗಳು ಊರಿನಲ್ಲೇ ವ್ಯವಹಾರ ನಡೆಸುತ್ತಾರೆ. ರಾಜಕೀಯ ಪ್ರಭಾವ ಇರುವ ಮಾಫಿಯಾದವರು ಬೆಂಗಳೂರು ಕಡೆಗೆ ಮರಳು ಸಾಗಿಸುತ್ತಾರೆ. ಒಟ್ಟಾರೆ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ ಒಬ್ಬ ವ್ಯಕ್ತಿ ಒಂದು ದಿವಸಕ್ಕೆ 50 ಸಾವಿರ ರೂ.ನಿಂದ ಒಂದೂವರೆ ಲಕ್ಷ ರೂ.ವರೆಗೆ ಸಂಪಾದನೆ ಮಾಡುತ್ತಿದ್ದಾನೆ.

ಸುದ್ದಿಯಾದಾಗ ಸದ್ದು ಮಾಡುವ ಅಧಿಕಾರಿಗಳು!

ಅಕ್ರಮ ಮರಳು ಮಾಫಿಯಾಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ಹೊಣೆ ಎಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ದ.ಕ.ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾದ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ವೌನ ವಹಿಸಿದೆ. ಡಿಸೆಂಬರ್ ತಿಂಗಳಲ್ಲಿ ಪೆರ್ನೆ ಸಮೀಪ ಮರಳು ಲಾರಿ ಢಿಕ್ಕಿಯಾಗಿ ಸಹೋದರರಿಬ್ಬರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡು ಅಧಿಕಾರಿಗಳು, ಒಂದೆರಡು ದಿವಸ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕೆಲವು ಅಕ್ರಮ ಮರಳು ಹಾಗೂ ಅಧಿಕ ಮರಳು ತುಂಬುವ ಲಾರಿಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದರು.

ಆ ಬಳಿಕ ಅಧಿಕಾರಿಗಳ ಸುದ್ದಿಯೇ ಇಲ್ಲವಾಗಿದೆ. ಮರಳು ಲಾರಿಗಳಿಂದ ಏನಾದರೊಂದು ಅವಘಡ ಸಂಭವಿಸಿ ಸುದ್ದಿಯಾದಾಗ, ಅಧಿಕಾರಿಗಳು ಮರಳು ಲಾರಿಗಳ ವಿರುದ್ಧ ಕಾರ್ಯಾಚರಣೆಗೆ ಇಳಿದು ಸದ್ದು ಮಾಡುತ್ತಾರೆ. ಆ ಬಳಿಕ ಅಧಿಕಾರಿಗಳು ವೌನಕ್ಕೆ ಶರಣಾಗುವುದು ಹಲವು ಅನುಮಾನಗಳನ್ನು ಹುಟ್ಟಿಸುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಒಳ ಪ್ರದೇಶಗಳಲ್ಲಿ ಸಂಗ್ರಹ
ನೇತ್ರಾವತಿ ನದಿಯಿಂದ ನೇರವಾಗಿ ಹಿಟಾಚಿ, ಜೆಸಿಬಿ ಯಂತ್ರಗಳಿಂದ ತೆಗೆದ ನೂರಾರು ಲೋಡ್ ಮರಳನ್ನು ಹೆದ್ದಾರಿಯ ಒಳ ಪ್ರದೇಶಗಳ ವಿಶಾಲ ಜಾಗದಲ್ಲಿ ಸಂಗ್ರಹಿಸಿ ಬಳಿಕ ಅಲ್ಲಿಂದ 10, 12 ಚಕ್ರಗಳ ಲಾರಿಗಳಿಗೆ ತುಂಬಿಸಿ ಬೆಂಗಳೂರು ಕಡೆಗೆ ಸಾಗಿಸಲಾಗುತ್ತಿದೆ.

Writer - ಎಂ.ಇಮ್ತಿಯಾಝ್ ತುಂಬೆ

contributor

Editor - ಎಂ.ಇಮ್ತಿಯಾಝ್ ತುಂಬೆ

contributor

Similar News