‘ವಿಶ್ವವಾಣಿ’ ದಿನಪತ್ರಿಕೆ ಲೋಕಾರ್ಪಣೆ; ದಮನವಾಗುತ್ತಿರುವ ಪತ್ರಿಕಾ ಸಿದ್ಧಾಂತ: ಸಿಎಂ ಆತಂಕ

Update: 2016-01-15 18:14 GMT

ಬೆಂಗಳೂರು, ಜ. 15: ಹಿಂದಿನ ದಿನಗಳಲ್ಲಿ ಮಾಧ್ಯಮಗಳಿಗಿದ್ದ ಪ್ರವೃತ್ತಿಗಳು ಇಂದು ಬದಲಾವಣೆಗೊಂಡಿದ್ದು, ಪತ್ರಿಕಾರಂಗ ಉದ್ಯಮವಾಗುವ ಮೂಲಕ ಪತ್ರಿಕಾ ಸಿದ್ಧಾಂತಗಳು ದಮನವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಶ್ವಾಕ್ಷರ ಮೀಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿಶ್ವವಾಣಿ’ ದಿನಪತ್ರಿಕೆ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, ಕಳೆದ 50-60 ವರ್ಷಗಳ ಹಿಂದೆ ಮಾಧ್ಯಮ ಗಳಿಗಿದ್ದ ಪ್ರವೃತ್ತಿಗಳು, ಸಿದ್ಧಾಂತಗಳು ಬದಲಾವಣೆಗೊಂಡಿವೆ ಎಂದು ತಿಳಿಸಿದರು.

 ಮಾಧ್ಯಮ ಆರಂಭದಲ್ಲಿ ಸ್ವಾತಂತ್ರದ ಒಂದು ಭಾಗವೇ ಆಗಿತ್ತು. ಅಲ್ಲದೆ, ದೇಶದ ಅಭಿವೃದ್ಧಿಗೆ ಸಾಧನವಾಗಿತ್ತು. ಅಂದು ಮಾಧ್ಯಮ ಒಂದು ವೃತ್ತಿಯಾಗಿತ್ತು. ಆದರೆ ಈ ರಂಗವು ಇಂದು ವೃತ್ತಿಯಾಗಿರದೆ ಉದ್ಯಮವಾಗಿ ಬೆಳೆಯತೊಡಗಿದೆ. ಇದರಿಂದ ಪತ್ರಿಕಾ ಸಿದ್ಧಾಂತಗಳು ನಶಿಸುತ್ತಿವೆ. ಈ ಪರಿಣಾಮ ಮಾಧ್ಯಮಗಳು ಜನರ ವಿಶ್ವಾಸ, ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾಧ್ಯಮಗಳು ಜನರ ಸಮಸ್ಯೆಗಳ ವಿರುದ್ಧ ಧ್ವನಿಯಾಗುವ ಜೊತೆಗೆ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು. ಭ್ರಷ್ಟಾಚಾರ, ಅಕ್ರಮಗಳ ವಿರುದ್ಧ ಹೋರಾಟ ಮತ್ತು ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಜನರ ವಿಶ್ವಾಸವನ್ನು ಗಳಿಸಲು ಮಾಧ್ಯಮ ಮುಂದಾಗಬೇಕು ಎಂದು ಸೂಚಿಸಿದರು.

  ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ನಾಡೋಜ ಪಾಟೀಲ್ ಪುಟ್ಟಪ್ಪ ಮಾತನಾಡಿ, ಇಂದು ಪತ್ರಿಕೆಗಳು ರಾಜಕೀಯ, ಹಣವಂತರ ಪರ ಇರುವುದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಜನರ ನಿರೀಕ್ಷೆಯಂತೆ ಪತ್ರಿಕೆಗಳು ಜನಪರವಾಗಿ ಕೆಲಸ ಮಾಡಬೇಕೇ ವಿನಃ ಬಂಡವಾಳಶಾಹಿಗಳ ಪರವಲ್ಲ. ಯಾವ ಪತ್ರಿಕೆ ಜನಪರ ಇರುವುದಿಲ್ಲವೋ ಅಂತಹ ಪತ್ರಿಕೆಗಳು ಮುಂದುವರಿಯದಂತೆ ಓದುಗರು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ವ್ಯಕ್ತಿ ಮತ್ತು ಸಮುದಾಯಗಳ ಮೇಲೆ ದುಷ್ಪರಿಣಾಮ ಬೀರುವಂತಹ ಲೇಖನಗಳನ್ನು ಪತ್ರಿಕೆಗಳು ಮುದ್ರಿಸಬಾರದು. ಲೇಖನಗಳನ್ನು ಬರೆಯುವಾಗ ಬಹಳ ಎಚ್ಚರವಹಿಸಿ ಬರೆಯಬೇಕು. ಇಂದು ಪತ್ರಿಕೆಗಳು ಬಂಡವಾಳಶಾಹಿ ವರ್ಗದಿಂದ ವಿಮುಕ್ತಿಗೊಂಡರೆ ಪತ್ರಿಕಾ ಸಿದ್ಧಾಂತಗಳು ಜೀವಂತವಾಗಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಾದಂಬರಿಕಾರ ಎಸ್.ಎಲ್.ಭೈರಪ್ಪ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ಸುಬುಧೇಂದ್ರ ತೀರ್ಥ ಸ್ವಾಮೀಜಿ, ವಿಶ್ವಾಕ್ಷರ ಮೀಡಿಯಾ ಅಧ್ಯಕ್ಷ ಕೆ.ಪಿ ನಂಜುಂಡಿ, ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ವರ್ ಭಟ್ ಉಪಸ್ಥಿತರಿದ್ದರು.

ರಾಜ್ಯದ ರೈತರು ಎದುರಿಸು ತ್ತಿರುವ ತೀವ್ರ ಬರಗಾಲ, ಆತ್ಮಹತ್ಯೆ, ಸಂಕಷ್ಟಗಳು ಸರಕಾರಕ್ಕೆ ಕಾಣಿಸುತ್ತಿಲ್ಲ. ಈ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ದಿಕ್ಕಿನಲ್ಲಿ ಮಾಧ್ಯಮಗಳು ಸರಕಾರವನ್ನು ನಿದ್ರಾ ವವಸ್ಥೆಯಿಂದ ಎಚ್ಚರಿಸಬೇಕಿದೆ.

ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News