ಧನಲಕ್ಷ್ಮಿ ಪೂಜಾರಿ-ತೇಜಸ್ವಿನಿ ಬಾಯಿ ಅವರಿಗೆ ವಿಧಾನಸಭೆ ಅಭಿನಂದನೆ
Photo: X/@CMofKarnataka
ಬೆಂಗಳೂರು: ಬಾಂಗ್ಲಾದೇಶದ ಢಾಕಾದಲ್ಲಿ ಪ್ರಸಕ್ತ ಸಾಲಿನ ನವೆಂಬರ್ ನಲ್ಲಿ ನಡೆದ ಎರಡನೆ ಅಂತರ್ ರಾಷ್ಟ್ರೀಯ ಮಹಿಳಾ ಕಬ್ಬಡಿ ಪಂದ್ಯಾವಳಿಯಲ್ಲಿ ವಿಜೇತರಾದ ಭಾರತ ತಂಡವನ್ನು ಪ್ರತಿನಿಧಿಸಿದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಹಾಗೂ ತರಬೇತುದಾರರಾದ ತೇಜಸ್ವಿನಿ ಬಾಯಿ ಅವರಿಗೆ ವಿಧಾನಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಮಂಗಳವಾರ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಅವರು ಧನಲಕ್ಷ್ಮಿ ಪೂಜಾರಿ ಹಾಗೂ ತೇಜಸ್ವಿನಿ ಬಾಯಿ ವಿಧಾನಸಭೆ ಕಲಾಪ ವೀಕ್ಷಿಸಲು ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಉಪಸ್ಥಿತರಿರುವ ಕುರಿತು ಪ್ರಕಟಿಸಿದರು. ಆಗ ಇಡೀ ಸದನ ಮೇಜು ತಟ್ಟಿ ಅವರಿಗೆ ಸ್ವಾಗತ ಕೋರಿತು.
ಧನಲಕ್ಷ್ಮಿ ಪೂಜಾರಿ ಹಾಗೂ ತೇಜಸ್ವಿನಿ ಬಾಯಿ ಸಾಧನೆಯನ್ನು ಅಭಿನಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಧನಲಕ್ಷ್ಮಿ ಪೂಜಾರಿಗೆ ಸರಕಾರದ ವತಿಯಿಂದ 5 ಲಕ್ಷ ರೂ.ಬಹುಮಾನ ನೀಡಿರುವ ಕುರಿತು ಮುಖ್ಯಮಂತ್ರಿ ಪ್ರಕಟಿಸಿದರು. ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್, ಬಹುಮಾನದ ಮೊತ್ತವನ್ನು 50 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಮನವಿ ಮಾಡಿದರು.