ಖಾಸಗಿ ಸ್ವತ್ತುಗಳಲ್ಲಿ ಅನಧಿಕೃತ ಜಾಹೀರಾತು ಫಲಕ; ಅಧಿಕೃತಗೊಳಿಸಲು ಫಲಕದಾರ ಸಂಘದ ಒತ್ತಾಯ
ಬೆಂಗಳೂರು, ಜ. 19: ನಗರದಲ್ಲಿ ಖಾಸಗಿ ಸ್ವತ್ತುಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಜಾಹೀರಾತು ಫಲಕಗಳನ್ನು ಬಿಬಿಎಂಪಿ ಅಧಿಕೃತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಜಾಹೀರಾತು ಫಲಕದಾರರ ಸಂಘ ಒತ್ತಾಯಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಅಧ್ಯಕ್ಷ ವಿಜಯ್ ಮಾತನಾಡಿ, ಬಿಬಿಎಂಪಿಯ ನೂತನ ನಿಯಮಾವಳಿಗಳ ಪ್ರಕಾರ ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು 2006 ರಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಸಮಯದಲ್ಲಿ 2000 ಹೋರ್ಡಿಂಗ್‌ಗಳಿಗೆ ಅನುಮತಿ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು.
ನಂತರ ನಷ್ಟದ ನೆಪ ಮತ್ತು ಇತರೆ ಕಾರಣಗಳಿಂದ ಈ ಅನುಮತಿಯನ್ನು 2007ರಲ್ಲಿ ಸ್ಥಗಿತಗೊಳಿಸಲಾಯಿತು. ಈಗ ಈ ಜಾಹೀರಾತು ಫಲಕಗಳು ಅನಧಿಕೃತ ಪಟ್ಟಿಗೆ ಸೇರಿಕೊಂಡಿವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಅನುಮತಿ ಸಿಗುವ ಆಲೋಚನೆಯಲ್ಲಿ ಇನ್ನೂ ಕೆಲವು ಫಲಕಗಳನ್ನು ಖಾಸಗಿ ಸ್ವತ್ತುಗಳಲ್ಲಿ ಅಳವಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನಾವು ಖಾಸಗಿ ಸ್ವತ್ತುಗಳಲ್ಲಿರುವ ಜಾಹೀರಾತುಗಳಿಗೆ ತೆರಿಗೆ ಕಟ್ಟಲು ಸಿದ್ಧರಿದ್ದೇವೆ. ಹೀಗಾಗಿ ಬಿಬಿಎಂಪಿ ಕೂಡಲೇ ಈ ಅನಧಿಕೃತ ಜಾಹೀರಾತು ಫಲಕಗಳಿಗೆ ಅನುಮತಿ ನೀಡಬೇಕು. ಜಾಹೀರಾತು ಫಲಕಗಳಿಗೆ ಈಗಿರುವ ಏಕರೂಪ ತೆರಿಗೆ ನೀತಿಗೆ ತಿದ್ದುಪಡಿ ತಂದು, ವಲಯವಾರು ತೆರಿಗೆ ಪದ್ಧತಿಯನ್ನು ಜಾರಿಗೊಳಿಸಬೇಕು ಮತ್ತು ಆನ್ ಲೈನ್‌ನೋಂದಣಿಯನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಜಾಹೀರಾತು ವಿಭಾಗದ ಆಯುಕ್ತರು ಅನಧಿಕೃತ ಜಾಹೀರಾತುಗಳಿಂದ ಬಿಬಿಎಂಪಿಗೆ ವಾರ್ಷಿಕ 2,000 ಕೋಟಿ ರೂ.ಗಳು ನಷ್ಟವಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ನಷ್ಟದಲ್ಲಿ ಬಿಬಿಎಂಪಿ ಆಸ್ತಿಯಲ್ಲಿ ಅಳವಡಿಸಿರುವ ಅನಧಿಕೃತ ಜಾಹೀರಾತುಗಳಿಂದ ಎಷ್ಟು, ಖಾಸಗಿ ಸ್ವತ್ತುಗಳಲ್ಲಿರುವ ಜಾಹೀರಾತುಗಳಿಂದ ಎಷ್ಟು ಸೋರಿಕೆಯಾಗುತ್ತಿದೆ ಎಂದು ಮೊದಲು ಬಹಿರಂಗಪಡಿಸಬೇಕು ಎಂದು ಅವರು ಸವಾಲೆಸೆದರು.
ಅನಧಿಕೃತ ಜಾಹೀರಾತುಗಳಿಗೆ ಅನುಮತಿ ನೀಡುವ ಬಗ್ಗೆ ಹಲವಾರು ಬಾರಿ ಬಿಬಿಎಂಪಿಗೆ, ಸರಕಾರಕ್ಕೆ ಮನವಿ ಮಾಡಿದರೂ ಇದುವರೆಗೂ ಯಾರು ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಒಂದು ಕಡೆ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದಿರುವ ಬಿಬಿಎಂಪಿ ಜಾಹೀರಾತು ಆಯುಕ್ತರು ನಷ್ಟದ ಹೆಸರಿನಲ್ಲಿ ಕಳೆದ 9 ವರ್ಷಗಳಿಂದ ಅನಧಿಕೃತ ಜಾಹೀರಾತು ಫಲಕ ಗಳಿಗೆ ಅನುಮತಿ ನೀಡಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಈ ಪರಿಣಾಮ ಸುಮಾರು 50 ಸಾವಿರ ಸ್ವಯಂ ಉದ್ಯೋಗಿಗಳು ಬೀದಿಗೆ ಬಿದ್ದಿದ್ದಾರೆ ಎಂದು ಅಳಲು ತೋಡಿಕೊಂಡರು.
ಗೋಷ್ಠಿಯಲ್ಲಿ ಜೈ ಭೀಮ್ ದಲಿತ ಮತ್ತು ಹಿಂದುಳಿದ ವರ್ಗಗಳ ಜಾಹೀರಾತುದಾರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೈ.ರಾಮಕೃಷ್ಣ ಉಪಸ್ಥಿತರಿದ್ದರು.